ಕಾಸರಗೋಡು: ಹೈನುಗಾರರಿಗೆ ಸಹಾಯವಾಗುವ ರೀತಿಯಲ್ಲಿ ರಾಜ್ಯದಲ್ಲಿ ಸಂಚರಿಸುವ ವೆಟರ್ನರಿ ಕ್ಲಿನಿಕ್ ಆರಂಭಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಗುವುದು ಎಂದು ಪಶುಸಂಗೋಪನೆ ಮತ್ತು ಹಾಲು ಅಭಿವೃದ್ಧಿ ಖಾತೆ ಸಚಿವೆ ಜೆ. ಚಿಂಜು ರಾಣಿ ತಿಳಿಸಿದ್ದಾರೆ.
ಅವರು ಪರಪ್ಪ ಬ್ಲಾಕ್ ಹೈನುಗಾರರ ಸಂಗಮ ಮತ್ತು ಕುರುಂಜೇರಿತಟ್ಟ್ ಹಾಲು ಉತ್ಪಾದಕರ ಸಹಕಾರಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರಾತ್ರಿ ವೇಳೆಯಲ್ಲೂ ವೆಟರಿನರಿ ವೈದ್ಯರ ಸೇವೆ ಲಭ್ಯವಾಗಿಸುವ ನಿಟ್ಟಿನಲ್ಲಿ ಎಲ್ಲ ಬ್ಲಾಕ್‍ಗಳಲ್ಲೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ಮಲಬಾರ್ ಪ್ರದೇಶದಲ್ಲಿ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದ್ದು, ಈ ವಲಯದಲ್ಲಿ 32ಕೋಟಿ ರೂ. ವೆಚ್ಚದಲ್ಲಿ ಹಾಲಿನ ಹುಡಿ ತಯಾರಿಕಾ ಘಟಕದ ನಿರ್ಮಾಣಕಾರ್ಯ ಪ್ರಗತಿಯಲ್ಲಿದೆ. ಇದರಿಂದ ಕೇರಳದಲ್ಲಿ ಹೆಚ್ಚುವರಿ ಹಾಲನ್ನು ಸಂಸ್ಕರಿಸಿ ಹಾಲಿನ ಹುಡಿಯಾಗಿಸಿ, ಇಲ್ಲೇ ಬಳಕೆಮಾಡುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು.
ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಾಲು ಅಭಿವೃದ್ಧಿ ಇಲಾಖೆ ನಿರ್ದೇಶಕ ವಿ. ಪಿ ಸುರೇಶ್ ಕುಮಾರ್ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಪರಪ್ಪ ಬ್ಲಾಕ್ ಪಂ. ಉಪಾಧ್ಯಕ್ಷ ಕೆ. ಭೂಪೇಶ್, ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.