ಆರಂಭಿಕ ಹಂತದಲ್ಲಿ ಎರಡು ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ವಿರೋಧಿಸಿ ಮೂರು ಸಾವಿರಕ್ಕೂ ಅಧಿಕ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಭಾರತೀಯ ರಾಷ್ಟ್ರೀಯ ಬ್ಯಾಂಕ್ ಉದ್ಯೋಗಿಗಳ ಒಕ್ಕೂಟದ (ಐಎನ್‌ಬಿಇಎಫ್) ರಾಜ್ಯದ ಘಟಕದ ಪ್ರಧಾನ ಕಾರ್ಯದರ್ಶಿ ನರಸಿಂಹಮೂರ್ತಿ ಎಂ.ಕೆ. 'ಪ್ರಜಾವಾಣಿ'ಗೆ ತಿಳಿಸಿದರು.
'ಬ್ಯಾಂಕ್‌ಗಳ ಖಾಸಗೀಕರಣದಿಂದಾಗಿ ದೇಶದ ಜನರ ಉಳಿತಾಯದ ಹಣದ ಲೂಟಿಗೆ ಅವಕಾಶ ಮಾಡಿಕೊಟ್ಟಂತೆ ಆಗಲಿದೆ. ಠೇವಣಿದಾರರ ಹಿತಾಸಕ್ತಿಗೆ ಧಕ್ಕೆಯಾಗಲಿದೆ. ಶಾಖೆಗಳು ಮುಚ್ಚುವ ಮತ್ತು ಜನಸಾಮಾನ್ಯರು ಬ್ಯಾಂಕಿಂಗ್ ಸೇವೆಗಳಿಂದ ವಂಚನೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ' ಎಂದು ಅವರು ಹೇಳಿದರು.
ಬ್ಯಾಂಕ್‌ಗಳು ರಾಷ್ಟ್ರೀಕರಣಗೊಂಡ ನಂತರ ಸರ್ಕಾರಿ ಸ್ವಾಮ್ಯದ ಯಾವುದೇ ಬ್ಯಾಂಕ್ ಮುಳುಗಿಲ್ಲ. ಮುಳುಗಿ ಹೋಗಿದ್ದ ಖಾಸಗಿ ಬ್ಯಾಂಕ್‌ಗಳನ್ನು ತಮ್ಮ ತೆಕ್ಕೆಗೆ ಸೇರಿಸಿಕೊಂಡು ಠೇವಣಿದಾರರ ಹಿತಾಸಕ್ತಿಗಳನ್ನು ಸರ್ಕಾರಿ ಬ್ಯಾಂಕ್‌ಗಳು ಕಾಪಾಡಿವೆ. ಇಂತಹ ಬ್ಯಾಂಕ್‌ಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಹಣಕಾಸು ಕ್ಷೇತ್ರವನ್ನು ದೇಶಿ-ವಿದೇಶಿ ಬಂಡವಾಳಶಾಹಿಗಳಿಗೆ ಒಪ್ಪಿಸುವ ಹುನ್ನಾರ ನಡೆಯುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.