ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಷನರ್ ಕಚೇರಿಯು (ಒಎಚ್‌ಸಿಎಚ್‌ಆರ್) ನೀಡಿದ್ದ ಹೇಳಿಕೆಗೆ ಭಾರತ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ.
ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಹೈಕಮಿಷನರ್ ಕಚೇರಿಯು (ಒಎಚ್‌ಸಿಎಚ್‌ಆರ್) ನೀಡಿದ್ದ ಹೇಳಿಕೆಗೆ ಭಾರತ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ.
'ಗಡಿರೇಖೆಯುದ್ದಕ್ಕೂ ನಡೆಯುತ್ತಿರುವ ಭಯೋತ್ಪಾದನೆ ಕೃತ್ಯಗಳಿಂದಾಗಿ ಸುರಕ್ಷತೆ, ಭದ್ರತೆಗೆ ಎದುರಾಗಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳದೇ ಕಚೇರಿಯು ಹೇಳಿಕೆ ನೀಡಿದೆ' ಎಂದು ಭಾರತ ಪ್ರತಿಕ್ರಿಯಿಸಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು, 'ಭಾರತ ಸರ್ಕಾರವು ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮಜರುಗಿಸಲಿದೆ, ನ್ಯಾಯಬದ್ಧ ಹಕ್ಕುಗಳ ವಿರುದ್ಧ ಅಲ್ಲ' ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ನಿರ್ದಿಷ್ಟ ಘಟನೆ ಉಲ್ಲೇಖಿಸಿ ಒಎಚ್‌ಸಿಎಚ್‌ಆರ್ ಹೇಳಿಕೆ ನೀಡಿತ್ತು. 'ಈ ಹೇಳಿಕೆ ಮೂಲಕ ಸಮಿತಿಯು ಭಾರತದ ಭದ್ರತಾ ಪಡೆ ಮತ್ತು ಸ್ಥಳೀಯ ಆಡಳಿತದ ವಿರುದ್ಧ ಆಧಾರರಹಿತವಾದ ಆರೋಪ ಮಾಡಿದೆ' ಎಂದು ಬಾಗ್ಚಿ ಹೇಳಿದ್ದಾರೆ.
ಜವಾಬ್ದಾರಿಯುತ ದೇಶವಾಗಿ, ಮಾನವ ಹಕ್ಕುಗಳ ರಕ್ಷಣೆಗೆ ಬದ್ಧವಾಗಿ ಭಾರತ ಸರ್ಕಾರವು ಗಡಿಯಲ್ಲಿ ಭಯೋತ್ಪಾದನೆ ಚಟುವಟಿಕೆಗಳನ್ನು ಹತ್ತಿಕ್ಕಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.