ಮಂಗಳೂರು: ಮಗುವಿಗೆ ತಾಯಿ ಎದೆಹಾಲು ಅವಶ್ಯಕ. ಆದರೆ ನಾನಾ ಕಾರಣಗಳಿಂದ ಎಳೆಯ ಶಿಶುಗಳು ತಾಯಿ ಎದೆಹಾಲಿನಿಂದ ವಂಚಿತವಾಗುತ್ತವೆ. ಹೀಗಾಗಿ ಮಗುವಿನ ಬೆಳವಣಿಗೆಯಲ್ಲೂ ಕುಂಠಿತವಾಗುತ್ತದೆ. ಆದರೆ ಮಂಗಳೂರಿನಲ್ಲಿ ಇನ್ಮುಂದೆ ಆ ರೀತಿಯ ಸಮಸ್ಯೆಗಳು ಇನ್ನು ಉದ್ಭವಾಗಲ್ಲ. ಬಡ ಗರ್ಭಿಣಿಯರ ಪಾಲಿಗೆ ಆಶ್ರಯವಾಗಿರುವ ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಐತಿಹಾಸಿಕ ಯೋಜನೆ ತಯಾರಾಗುತ್ತಿದ್ದು, ಇದರಿಂದ ಇನ್ಮುಂದೆ ಎದೆಹಾಲು ವಂಚಿತ ನವಜಾತ ಶಿಶುಗಳಿಗೆ ಅಮೃತಪಾನ ದೊರಕಲಿದೆ.
ತಾಯಿಯ ಎದೆ ಹಾಲು ಅಮೃತ ಸಮಾನವಾದ ಪಾನ ಎಂಬ ಮಾತು ಜನಜನಿತ. ಆದರೆ ಇಂದಿಗೂ ಅದೆಷ್ಟೋ ಕಾರಣದಿಂದ ನವಜಾತ ಶಿಶುಗಳು ತಾಯಿ ಎದೆಹಾಲಿನಿಂದ ವಂಚಿತರಾಗುತ್ತಿದ್ದಾರೆ. ಆದರೆ ಈ ರೀತಿಯಾಗಬಾರದು ಎಂಬ ಕಾರಣಕ್ಕೆ ಇದೀಗ ಮಂಗಳೂರಿನ ಪ್ರಸಿದ್ಧ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ತೆರೆಯುವ ಎಲ್ಲಾ ತಯಾರಿ ನಡೆದಿದೆ.ಮಂಗಳೂರಿನ ಸರ್ಕಾರಿ ಲೇಡಿಗೋಶನ್ ಪ್ರಸಿದ್ಧ ಹೆರಿಗೆ ಆಸ್ಪತ್ರೆಯಾಗಿದ್ದು, 7ಕ್ಕೂ ಅಧಿಕ ಜಿಲ್ಲೆಯ ತಾಯಿಯಂದಿರು ಅವಲಂಬಿಸಿರುವ ಈ ಆಸ್ಪತ್ರೆಯಲ್ಲಿ ತಿಂಗಳೊಂದರಲ್ಲೇ ಸುಮಾರು 700ಕ್ಕೂ ಅಧಿಕ ಹೆರಿಗೆಯಾಗುತ್ತವೆ. ಇದೀಗ ಈ ಆಸ್ಪತ್ರೆಯಲ್ಲಿ ಮಹತ್ವದ ಯೋಜನೆಯೊಂದು ತಯಾರಾಗುತ್ತಿದೆ. ಈ ಯೋಜನೆ ಸಾಕಾರಗೊಳ್ಳಲು ತಿಂಗಳುಗಳಷ್ಟೇ ಬಾಕಿಯಿದೆ. ರೋಟರಿ ಕ್ಲಬ್ ಸಹಯೋಗದಲ್ಲಿ ಹ್ಯೂಮನ್ ಮಿಲ್ಕ್ ಬ್ಯಾಂಕ್ ತೆರೆಯುವುದಕ್ಕೆ ಲೇಡಿಗೋಷನ್ ಆಸ್ಪತ್ರೆಯಲ್ಲಿ ಎಲ್ಲಾ ತಯಾರಿಗಳು ನಡೆಯುತ್ತಿದೆ. ಸುಮಾರು 45 ಲಕ್ಷ ವೆಚ್ಚದಲ್ಲಿ ಯಂತ್ರೋಪಕರಣ, ಸಲಕರಣೆ ಬಳಸಿಕೊಂಡು ಈ ಹ್ಯೂಮನ್ ಮಿಲ್ಕ್ ಬ್ಯಾಂಕ್ ತೆರೆಯಲಾಗುತ್ತದೆ. ಇದರಿಂದ ಅವಧಿ ಪೂರ್ವ ಜನಿಸಿದ, ತಾಯಿ ಕಳೆದುಕೊಂಡ, ತಾಯಿಯ ಎದೆ ಹಾಲು ಕೊರತೆಯಿರುವ ನವಜಾತ ಶಿಶುಗಳಿಗೆ ಅಮೃತ ಪಾನ ಲಭ್ಯವಾಗಲಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾಗಿರುವ ಡಾ. ಎಂ.ಆರ್. ದುರ್ಗಾಪ್ರಸಾದ್, ಕರಾವಳಿ ಮತ್ತು ಸುತ್ತ-ಮುತ್ತಲಿನ ಸಾವಿರಾರು ತುಂಬು ಗರ್ಭಿಣಿಯರು ಹೆರಿಗಾಗಿ ಲೇಡಿಗೋಷನ್ ಆಸ್ಪತ್ರೆಗೆ ಬರುತ್ತಾರೆ. ಬಂದಂತಹ ಬಹುತೇಕರು ಬಡವರಾಗಿದ್ದು, ಪೌಷ್ಠಿಕಾಂಶದ ಕೊರತೆಯಿಂದ ತಾಯಿಗೆ ಎದೆಹಾಲು ಕೊರತೆ ಅಥವಾ ಅವಧಿ ಪೂರ್ವವೇ ಹೆರಿಗೆಯಾಗುವ ಪ್ರಕರಣಗಳು ಕಂಡುಬರುತ್ತವೆ. ಈ ಎಲ್ಲಾ ತೊಂದರೆಗಳಿಗೆ ಮುಕ್ತಿಯಾಗುವಂತಹ ಯೋಜನೆಯನ್ನು ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಾಡುತ್ತಿದ್ದೇವೆ. ಈ ಹ್ಯೂಮನ್ ಮಿಲ್ಕ್ ಬ್ಯಾಂಕ್‌ಗೆ ತಾಯಂದಿರು ಎದೆಹಾಲನ್ನು ದಾನವಾಗಿ ನೀಡಿದರೆ, ಅದನ್ನು ಶೀತಲೀಕರಿಸಿ, ಅಗತ್ಯವಿರುವ ಎಳೆಯ ಮಕ್ಕಳಿಗೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಪ್ರಸಕ್ತ ಹೆರಿಗೆಗಳಲ್ಲಿ ಶೇಕಡಾ 30ರಷ್ಟು ನವಜಾತ ಶಿಶುಗಳು ಅವಧಿಪೂರ್ವ ಜನನವಾಗುತ್ತಿವೆ. ಹೀಗಾಗಿ ಇಂತಹ ಮಕ್ಕಳಿಗೆ ಪ್ರತಿರೋಧ ಶಕ್ತಿ ಕಡಿಮೆಯಿದ್ದು ಎನ್.ಐ.ಸಿ.ಯುನಲ್ಲಿ ಚಿಕಿತ್ಸೆ ನೀಡಿ ಉಳಿಸುವ ಭಗೀರಥ ಪ್ರಯತ್ನವನ್ನು ವೈದ್ಯಾಧಿಕಾರಿಗಳು ಮಾಡುತ್ತಾರೆ. ಈ ಸಂದರ್ಭ ಮಗುವಿಗೆ ತಾಯಿಯ ಎದೆ ಹಾಲು ಅವಶ್ಯವಾಗಿದ್ದು, ಇಂತಹ ನವಜಾತ ಶಿಶುಗಳಿಗೆ ಮಿಲ್ಕ್ ಬ್ಯಾಂಕ್‌ನಲ್ಲಿ ಸಂಗ್ರಹಿಸಿದ ಎದೆಹಾಲನ್ನು ನೀಡಿದರೆ ಅಮೃತದ ಶಕ್ತಿ ಬರುತ್ತದೆ. ತಾಯಿಯ ಎದೆಹಾಲಿನಲ್ಲಿ ಲವಣಾಂಶ, ಪ್ರೋಟೀನ್, ಶಕ್ಕರಪಿಷ್ಠ, ಫ್ಯಾಟ್, ಪ್ರತಿರೋಧಕ ಶಕ್ತಿ ಹೆಚ್ಚಿಸುವ ಜೀವಕಣ ಅತ್ಯಧಿಕವಾಗಿದ್ದು, ಇದು ಶಿಶುವಿನ ಉಳಿಯುವಿಕೆಗೆ ಸಹಾಯವಾಗಲಿದೆ. ಮೊದಲಿಗೆ ಉಪಕರಣ ಬಳಸಿ ಎದೆಹಾಲು ಡೋನೆಟ್ ಮಾಡುವ ತಾಯಿಯಿಂದ ಪಂಪ್ ಮಾಡಿ ಪ್ಯಾಶ್ಚುರೈಸೇಶನ್ ಪ್ರಕ್ರಿಯೆ ಮಾಡಿ ಆ ಬಳಿಕ ಶಿಥಿಲೀಕರಣ ಮಾಡಿ ಎದೆಹಾಲು ಸಂಗ್ರಹಿಸಲಾಗುತ್ತದೆ ಎಂದು ಹ್ಯೂಮನ್ ಮಿಲ್ಕ್ ಬ್ಯಾಂಕ್ ವಿಭಾಗದ ನೋಡೆಲ್ ಅಧಿಕಾರಿ ಡಾ. ಬಾಲಕೃಷ್ಣ ರಾವ್ ಹೇಳಿದ್ದಾರೆ. ತಾಯಿ ಎದೆಹಾಲು ಅವಶ್ಯಕವಿರುವ ನವಜಾತ ಶಿಶುಗಳಿಗೆ ಇದರಿಂದ ಸಾಕಷ್ಟು ಉಪಯೋಗವಾಗಲಿದೆ. ಹೀಗಾಗಿ ತಾಯಂದಿರಿಗೆ ಎದೆಹಾಲಿನ ಮಹತ್ವವನ್ನು ತಿಳಿಸಿ ಎದೆ ಹಾಲು ದಾನವನ್ನು ಮಾಡುವಂಥ ಪ್ರೇರಣಾ ಕಾರ್ಯಗಳನ್ನು ನಡೆಸುವುದಕ್ಕೂ ನಿರ್ಧರಿಸಲಾಗಿದೆ. ಒಟ್ಟಿನಲ್ಲಿ ಬಹಳ ಅಪರೂಪವಾದ ಈ ಹ್ಯೂಮನ್ ಮಿಲ್ಕ್ ಬ್ಯಾಂಕ್ ಯೋಜನೆ ನಿಜಕ್ಕೂ ಶ್ಲಾಘನೀಯವಾಗಿದೆ.