ನವದೆಹಲಿ: ಜವಳಿ ಮೇಲಿನ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ)ಯನ್ನು ಶೇಕಡಾ 5 ರಿಂದ ಶೇಕಡಾ 12ಕ್ಕೆ ಏರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವು ಮುಂದೂಡಿದ್ದು, ಟೆಕ್ಸ್ ಟೈಲ್ ವ್ಯಾಪಾರಿಗಳಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ 46ನೇ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಜಿಎಸ್‍ಟಿ ಹೆಚ್ಚಳ ಮಾಡುವ ನಿರ್ಧಾರವನ್ನು ಮುಂದೂಡಲು ಜಿಎಸ್‍ಟಿ ಕೌನ್ಸಿಲ್ ಸರ್ವಾನುಮತದಿಂದ ನಿರ್ಧರಿಸಿದೆ.
ಪ್ರಸ್ತುತ, ಪ್ರತಿ ಪೀಸ್‍ಗೆ 1,000 ರೂ.ವರೆಗಿನ ಮೊತ್ತದ ಮೇಲೆ ಶೇ. 5 ರಷ್ಟು ಜಿಎಸ್‍ಟಿ ವಿಧಿಸಲಾಗುತ್ತದೆ, ಆದರೆ ಜವಳಿ ಮೇಲಿನ ಜಿಎಸ್ ಟಿ ದರವನ್ನು ಶೇ. 5 ರಿಂದ ಶೇ. 12ಕ್ಕೆ ಹೆಚ್ಚಿಸುವ ಜಿಎಸ್‍ಟಿ ಕೌನ್ಸಿಲ್‍ನ ಶಿಫಾರಸ್ಸಿನಿಂದ ಸಣ್ಣ ವ್ಯಾಪಾರಿಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಈ ನಿಯಮ ಜಾರಿಯಾದರೆ ಜವಳಿ ವಲಯ ಹಾಗೂ ಗ್ರಾಹಕರಿಗೆ ಹೊರೆಯಾಗಲಿದೆ. ಇದು ಜವಳಿ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಮತ್ತು ಬೇಡಿಕೆಯ ಕುಸಿತಕ್ಕೆ ಕಾರಣವಾಗುತ್ತದೆ ಎಂದು ಉದ್ದೇಶದಿಂದ ಸದ್ಯ ಜಿಎಸ್ ಟಿ ಹೆಚ್ಚಳ ಮಾಡುವ ನಿರ್ಧಾರವನ್ನು ಕೈಬಿಡಲಾಗಿದೆ.
ಜವಳಿ ಮೇಲಿನ ಜಿಎಸ್ ಟಿ ದರವನ್ನು ಶೇ. 5 ರಿಂದ ಶೇ. 12ಕ್ಕೆ ಏರಿಸುವ ಕೇಂದ್ರ ಸರ್ಕಾರದ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.