ತಿರುವನಂತಪುರ: ತಮಿಳುನಾಡು ಸರಕಾರವು ಯಾವುದೇ ಮುನ್ಸೂಚನೆಯನ್ನು ನೀಡದೇ ಪದೇ ಪದೇ ರಾತ್ರಿಯ ವೇಳೆ ಮುಲ್ಲಪೆರಿಯಾರ್ ಅಣೆಕಟ್ಟಿನ ದ್ವಾರಗಳನ್ನು ತೆರೆಯುತ್ತಿದೆ ಎಂದು ಕೇರಳ ಸರಕಾರವು ಮಂಗಳವಾರ ಆರೋಪಿಸಿದೆ.
ಮುಲ್ಲಪೆರಿಯಾರ್ ಅಣೆಕಟ್ಟನ್ನು ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಪೆರಿಯಾರ್ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ,ಆದರೆ ಅದನ್ನು ತಮಿಳುನಾಡು ಸರಕಾರವು ನಿರ್ವಹಿಸುತ್ತಿದೆ.
ರಾಜ್ಯ ಸರಕಾರವು ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅಹವಾಲು ಸಲ್ಲಿಸಲಿದೆ ಎಂದು ತಿಳಿಸಿದ ಕೇರಳ ಜಲ ಸಂಪನ್ಮೂಲಗಳ ಸಚಿವ ರೋಷಿ ಆಗಸ್ಟಿನ್ ಅವರು, ತಮಿಳುನಾಡು ಅಧಿಕಾರಿಗಳು ಸೋಮವಾರ ರಾತ್ರಿ ಕೇರಳಕ್ಕೆ ಯಾವುದೇ ಮಾಹಿತಿ ನೀಡದೆ ಅಣೆಕಟ್ಟಿನ ಒಂಭತ್ತು ದ್ವಾರಗಳನ್ನು ತೆರದಿದ್ದರು ಮತ್ತು ಇದರಿಂದಾಗಿ ಜನರ ಮನೆಗಳಿಗೆ ನೀರು ನುಗ್ಗಿದೆ ಎಂದು ಆರೋಪಿಸಿದರು.
ಏಕಕಾಲದಲ್ಲಿ ಅಣೆಕಟ್ಟಿನ ಒಂಭತ್ತು ದ್ವಾರಗಳನ್ನು ತೆರೆದಿರುವುದು ಇದೇ ಮೊದಲು ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರಸ್ತುತ ಅಣೆಕಟ್ಟಿನ ಸಮೀಪದ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ.
ಹಗಲಿನ ಹೊತ್ತಿನಲ್ಲಿ ತನಗೆ ಮಾಹಿತಿ ನೀಡಿದ ಬಳಿಕ ಅಣೆಕಟ್ಟಿನಿಂದ ನೀರನ್ನು ಬಿಡುಗಡೆಗೊಳಿಸುವಂತೆ ಕೇರಳ ಸರಕಾರವು ತಮಿಳುನಾಡಿಗೆ ಸೂಚಿಸಿದೆ,ಆದರೂ ಅದು ರಾತ್ರಿಯ ವೇಳೆಯಲ್ಲಿ ಪದೇ ಪದೇ ದ್ವಾರಗಳನ್ನು ತೆರೆಯುತ್ತಿದೆ ಎಂದು ಆಗಸ್ಟಿನ್ ತಿಳಿಸಿದರು.
ಅಣೆಕಟ್ಟಿನಿಂದ ನೀರನ್ನು ಬಿಡುಗಡೆಗೊಳಿಸಿರುವ ಹಿನ್ನೆಲೆಯಲ್ಲಿ ಕೇರಳ ಸರಕಾರವು ಪ್ರದೇಶದಲ್ಲಿ ಕಟ್ಟೆಚ್ಚರವನ್ನು ಘೋಷಿಸಿದೆ.