ತಿರುವನಂತಪುರ: ರಾಜ್ಯದಲ್ಲಿ ಹೊಸ ವೃತ್ತಿ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಕಾರ್ಮಿಕ ಮತ್ತು ಸಾರ್ವಜನಿಕ ಶಿಕ್ಷಣ ಸಚಿವ ವಿ ಶಿವಂಕುಟ್ಟಿ ಹೇಳಿರುವರು.
ರಾಜ್ಯದ ಎಲ್ಲಾ ವೃತ್ತಿ ಅಭಿವೃದ್ಧಿ ಚಟುವಟಿಕೆಗಳನ್ನು ಸಮನ್ವಯಗೊಳಿಸುವುದು, ರಾಜ್ಯ ವೃತ್ತಿ ಅಭಿವೃದ್ಧಿ ಮಿಷನ್ ನ್ನು ರಚಿಸುವುದು ಮತ್ತು ಎಲ್ಲಾ ಪದವೀಧರರನ್ನು ಹಂತ ಹಂತವಾಗಿ ಉದ್ಯೋಗಕ್ಕೆ ತರುವುದು ಮುಖ್ಯ ಉದ್ದೇಶಗಳಾಗಿವೆ. ತಿರುವನಂತಪುರದಲ್ಲಿ ನೇಮಕಾತಿ ಉದ್ಯೋಗ ಮೇಳ - 2021 ನ್ನು ಸಚಿವರು ಉದ್ಘಾಟಿಸಿ ಮಾತನಾಡಿದರು.
ಎಲ್ ಡಿ ಎಫ್ ಪ್ರಣಾಳಿಕೆಯಲ್ಲಿ ಹೇಳಿದಂತೆ ಉದ್ಯೋಗ ಸೃಷ್ಟಿ ಮಾಡಲಾಗುವುದು ಎಂದು ಸಚಿವರು ಹೇಳಿದರು. ಎಲ್ಲ ಜಿಲ್ಲೆಗಳಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುವುದು. ಉದ್ಯೋಗ ಮೇಳಗಳನ್ನು ಉದ್ಯೋಗ ವಿನಿಮಯ ಕೇಂದ್ರಗಳು ಮತ್ತು ಉದ್ಯೋಗ ಕೇಂದ್ರಗಳ ಸಹಯೋಗದಲ್ಲಿ ಆಯೋಜಿಸಲಾಗುವುದು ಎಂದರು.
ಐಟಿ, ಜವಳಿ, ಆಭರಣ, ಆಟೋಮೊಬೈಲ್, ಆಡಳಿತ, ಮಾರುಕಟ್ಟೆ, ಹಾಸ್ಪಿಟಾಲಿಟಿ ಮತ್ತು ಹೆಲ್ತ್‍ಕೇರ್‍ನ ಪ್ರಮುಖ ಕಂಪನಿಗಳು ಮೇಳಗಳಲ್ಲಿ ಭಾಗವಹಿಸುತ್ತಿವೆ. ಖಾಸಗಿ ವಲಯದ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಒಟ್ಟುಗೂಡಿಸಿ ಗರಿಷ್ಠ ಉದ್ಯೋಗ ಪಡೆಯಲು ಸಹಾಯ ಮಾಡುವ ಉದ್ದೇಶದಿಂದ ಸರ್ಕಾರವು ಮೆಗಾ ಉದ್ಯೋಗ ಮೇಳಗಳನ್ನು ಆಯೋಜಿಸುತ್ತಿದೆ.
ಕೇರಳದ ಸಾಂಪ್ರದಾಯಿಕ ಉದ್ಯೋಗ ವಿನಿಮಯ ಕೇಂದ್ರಗಳನ್ನು ಎಲೆಕ್ಟ್ರಾನಿಕ್ ಉದ್ಯೋಗ ವಿನಿಮಯ ಕೇಂದ್ರಗಳನ್ನಾಗಿ ಮಾಡುವ ಉದ್ದೇಶದಿಂದ, ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೋಂದಾಯಿಸಲಾದ ಉದ್ಯೋಗಾಕಾಂಕ್ಷಿಗಳ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದೆ ಮತ್ತು ಆನ್‍ಲೈನ್ ಸಾಫ್ಟ್‍ವೇರ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಜೊತೆಗೆ ವೆಬ್‍ಸೈಟ್ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಉದ್ಯೋಗಾಕಾಂಕ್ಷಿಗಳ ಬೆರಳ ತುದಿಯಲ್ಲಿ ಆನ್‍ಲೈನ್ ಸೇವೆಗಳು ಲಭ್ಯವಾಗುವಂತೆ ಎನ್‍ಐಸಿ ಸಹಾಯದಿಂದ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಅನ್ನು ಸಚಿವ ವಿ ಶಿವಂಕುಟ್ಟಿ ಉದ್ಘಾಟಿಸಿದರು.