ಕಾಸರಗೋಡು: ಕೇರಳ ಅಭಿವೃದ್ಧಿ ಕಾರ್ಯಗಳಿಂದ ವಂಚಿತವಾಗಿದ್ದು, ರಾಜ್ಯ ಇಂದು ವಿವಾದ, ವಿಧ್ವಂಸಕ ಕೃತ್ಯಗಳ ಮೂಲಕ ಕುಖ್ಯಾತಿಗೆ ಕಾರಣವಗುತ್ತಿರುವುದಾಗಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ ಕೃಷ್ಣದಾಸ್ ತಿಳಿಸಿದ್ದಾರೆ.
ಅವರು ರಾಷ್ಟ್ರೀಯ ಸಾವಯವ ಕೃಷಿ ಸಮ್ಮೇಳನ ಅಂಗವಾಗಿ ಗುರುವಾರ ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕೃಷಿಕರ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಣ್ಣ ಒಂದು ವಿಭಾಗದ ಕೃಷಿಕರ ವಿರೋಧ ಹಿನ್ನೆಲೆಯಲ್ಲಿ ದೇಶದ ಮೂರು ಮಹತ್ವದ ಕಾನೂನನ್ನು ಹಿಂತೆಗೆದುಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಜನರೊಂದಿಗಿರುವ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ದೇಶದ ಕೃಷಿಕರ ಏಳಿಗೆಗಾಗಿ ನರೇಂದ್ರ ಮೋದಿ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಮತ್ತಷ್ಟು ಮಹತ್ವದ ಯೋಜನೆಗಳಿಗೆ ಚಾಲನೆ ದೊರೆಯಲಿದೆ. ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಏಕಾಧಿಪತ್ಯ ಹಾಗೂ ಜನರ ಭಾವನೆಗಳಿಗೆ ಬೆಲೆನೀಡದ ಧೋರಣೆ ರಾಜ್ಯದ ಅಭಿವೃದ್ಧಿಗೆ ಮಾರಕವಾಗಲಿರುವುದಾಗಿ ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಕೆ.ಶ್ರೀಕಾಂತ್, ಪ್ರಮಿಳಾ ಸಿ.ನಾಯ್ಕ್, ಎಂ. ಸಂಜೀವ ಶೆಟ್ಟಿ, ಸವಿತಾ ಭಟ್, ಸತೀಶ್ಚಂದ್ರ ಭಂಡಾರಿ, ವಿಜಯ್ ಕುಮಾರ್ ರೈ ಮುಂತಾದವರು ಉಪಸ್ಥಿತರಿದ್ದರು.
ಗುಜರಾತಿನ ಆನಂದ್‍ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ರಾಷ್ಟ್ರೀಯ ಸಾವಯವ ಕೃಷಿ ಸಮ್ಮೇಳನ ಅಂಗವಾಗಿ ಕಾಸರಗೋಡು ಜಿಲ್ಲೆಯ ಹತ್ತು ಕೇಂದ್ರಗಳಲ್ಲಿ ಕೃಷಿಕರ ಸಂಗಮ ಆಯೋಜಿಸಲಾಗಿತ್ತು. ಈ ಸಂದರ್ಭ ರಾಷ್ಟ್ರೀಯ ಸಾವಯವ ಕೃಷಿ ಸಮ್ಮೇಳನ ಮತ್ತು ದೇಶದ ಪ್ರಮುಖ ಕೃಷಿಕರನ್ನೊಳಗೊಂಡ ಚರ್ಚಾ ಕಾರ್ಯಕ್ರಮಗಳ ನೇರ ಪ್ರಸಾರ ನಡೆಯಿತು.