ಗುವಾಹಟಿ: ಮೊನ್ ಜಿಲ್ಲೆಯಲ್ಲಿ ಭದ್ರತಾ ಪಡೆಯಿಂದ ನಾಗರಿಕರ ಹತ್ಯೆ ಖಂಡಿಸಿ ಸೋಮವಾರ ನಾಗಾಲ್ಯಾಂಡ್‌ನಲ್ಲಿ ಜನ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂಗಡಿ-ಮುಂಗಟ್ಟು, ಕಚೇರಿಗಳನ್ನು ಮುಚ್ಚಿ ಬಹುತೇಕ ಕಡೆ ಬಂದ್ ಆಚರಿಸಿದ್ದಾರೆ.
ಇನ್ನೊಂದೆಡೆ ಹತರಾದ 14 ನಾಗರಿಕರ ಸಾಮೂಹಿಕ ಅಂತ್ಯ ಸಂಸ್ಕಾರವನ್ನು ಮೊನ್ ಜಿಲ್ಲೆಯಲ್ಲಿ ನಡೆಸಲಾಗಿದೆ.
ಘಟನೆಯನ್ನು ತೀವ್ರವಾಗಿ ಖಂಡಿಸಿರುವ ನಾಗಾಲ್ಯಾಂಡ್ ಜನ, ಸೋಮವಾರ ಬೆಳಿಗ್ಗೆಯಿಂದ ಸ್ವಯಂಪ್ರೇರಿತವಾಗಿ ಬಂದ್ ಆಚರಿಸಿ, ಭದ್ರತಾ ಪಡೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಂಜೆ 6 ಗಂಟೆಯವರೆಗೆ ವಿವಿಧ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ.
ಇನ್ನೊಂದೆಡೆ ಘಟನೆ ನಡೆದ ಮೊನ್ ಜಿಲ್ಲೆಯಲ್ಲಿ ಕರ್ಫ್ಯೂ ಹೇರಲಾಗಿದ್ದು, ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೇ ನಾಗಾ ಜನರಿರುವ ಪಕ್ಕದ ಅಸ್ಸಾಂ, ಮಣಿಪುರ ಹಾಗೂ ಅರುಣಾಚಲಪ್ರದೇಶದಲ್ಲೂ ಭದ್ರತೆ ಹೆಚ್ಚಿಸಲಾಗಿದೆ.
ಘಟನೆಯಲ್ಲಿ ಮೃತರಾದವರಿಗೆ ನಾಗಾಲ್ಯಾಂಡ್ ಸರ್ಕಾರ ತಲಾ ₹5 ಲಕ್ಷ ಪರಿಹಾರ ಘೋಷಣೆ ಮಾಡಿದೆ.
ಎನ್‌ಎಸ್‌ಸಿಎನ್ ನಿಷೇಧಿತ ಸಂಘಟನೆಯ ಯಾಂಗ್ ಅಂಗ್ ಬಣದ ಉಗ್ರರ ವಿರುದ್ಧದ ಅಸ್ಸಾಂ ರೈಪಲ್ಸ್ ಪಡೆಯ ಕಾರ್ಯಾಚರಣೆಯಲ್ಲಿ ಮೊನ್ ಜಿಲ್ಲೆಯ ಟಿರು ಮತ್ತು ಒಟಿಂಗ್ ಗ್ರಾಮಗಳಲ್ಲಿ 14 ನಾಗರಿಕರನ್ನು ಭದ್ರತಾ ಪಡೆಗಳ ಸಿಬ್ಬಂದಿ ಗುಂಡಿಟ್ಟು ಕೊಂದಿದ್ದರು. ದಾಳಿಯಲ್ಲಿ 11 ನಾಗರಿಕರು ಗಾಯಗೊಂಡಿದ್ದಾರೆ. ಘಟನೆ ಶನಿವಾರ ಸಂಜೆಯ ಹೊತ್ತು ನಡೆದಿತ್ತು ಎಂದು ಪೊಲೀಸರು ಭಾನುವಾರ ತಿಳಿಸಿದ್ದರು.