ನವದೆಹಲಿ: ಕೊರೊನಾವೈರಸ್ ಹೊಸ ರೂಪಾಂತರ ಓಮಿಕ್ರಾನ್ ಪತ್ತೆಗೆ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕಿದೆ. ಕೊವಿಡ್-19 ಹಾಟ್ ಸ್ಪಾಟ್ ಎನಿಸಿರುವ ಕರ್ನಾಟಕದ ಧಾರವಾಡ ಮತ್ತು ಮಹಾರಾಷ್ಟ್ರದ ಥಾಣೆಗಳಿಂದ ಶೇ.100ರಷ್ಟು ಮಾದರಿಯನ್ನು ಸಂಗ್ರಹಿಸಿ ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ರವಾನಿಸುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಮಂಗಳವಾರ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ನೇತೃತ್ವದಲ್ಲಿ ಪರಿಶೀಲನಾ ಸಭೆ ನಡೆಸಲಾಯಿತು. ಈ ವೇಳೆ ರಾಜ್ಯದಲ್ಲಿ ಕೊವಿಡ್-19 ಪಾಸಿಟಿವ್ ಬಂದಿರುವ ರೋಗಿಗಳ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು (INSACOG) ಐಎನ್ಎಸ್ಎಸಿಓಜಿಗೆ ಕಳುಹಿಸುವಂತೆ ಸೂಚಿಸಲಾಗಿದೆ. ಇದಕ್ಕೂ ಮೊದಲು RT-PCR ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿರುವ ರೋಗಿಗಳ ಪೈಕಿ ಶೇ.5ರಷ್ಟು ಜನರ ಮಾದರಿಯನ್ನು ಮಾತ್ರ ಜೀನೋಮ್ ಸೀಕ್ವೆನ್ಸಿಂಗ್ ನಡೆಸಲು ರವಾನಿಸಲಾಗುತ್ತಿತ್ತು.
ಧಾರವಾಡದ ವೈದ್ಯಕೀಯ ಕಾಲೇಜು ಮತ್ತು ಥಾಣೆಯ ಭಿವಾಂಡಿ ಮನೆಯೊಂದರಲ್ಲಿ ಕೊವಿಡ್-19 ಪಾಸಿಟಿವ್ ಪತ್ತೆಯಾದ ಎಲ್ಲಾ ರೋಗಿಗಳ ಮಾದರಿಯನ್ನು ರವಾನಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಸರ್ಕಾರವು ಸೂಚಿಸಿದೆ ಎಂದು ತಿಳಿದು ಬಂದಿದೆ.
ರಾಜ್ಯಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆ:
ಕೊವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಹಾಟ್ ಸ್ಪಾಟ್ ಅನ್ನು ಗುರುತಿಸುವುದು ಹಾಗೂ ಅಲ್ಲಿರುವ ಪ್ರತಿಯೊಬ್ಬ ಸೋಂಕಿತರ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ನಡೆಸಬೇಕು ಎಂದು ನಾವು ರಾಜ್ಯಗಳಿಗೆ ಸೂಚನೆ ನೀಡುತ್ತೇವೆ. ಧಾರವಾಡದ ಒಂದು ಶಿಕ್ಷಣ ಸಂಸ್ಥೆಯಲ್ಲಿ 240ಕ್ಕೂ ಹೆಚ್ಚು ಕೊವಿಡ್-19 ಸೋಂಕಿತ ಪ್ರಕರಣಗಳು ಹಾಗೂ ಭಿವಾಂಡಿಯ ವೃದ್ಧಾಶ್ರಮದಲ್ಲಿ 60 ಪ್ರಕರಣಗಳು ಪತ್ತೆಯಾಗಿವೆ. ನೀವು ಅಂತಹ ಸಂಖ್ಯೆಯನ್ನು ಹೊಂದಿರುವ ಕಡೆಗಳಲ್ಲಿ ಕಡ್ಡಾಯವಾಗಿ ಜೀನೋಮ್ ಸೀಕ್ವೆನ್ಸಿಂಗ್ ಇರಬೇಕು ಎಂದು ನಾವು ರಾಜ್ಯಗಳಿಗೆ ತಿಳಿಸಿದ್ದೇವೆ," ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ನೋಮ್ ಸೀಕ್ವೆನ್ಸಿಂಗ್ ಏಕೆ ಮಾಡಲಾಗುವುದು?
ಸಾಮಾನ್ಯವಾಗಿ ವಿಜ್ಞಾನಿಗಳಿಗೆ ಕೋವಿಡ್ ಸ್ವ್ಯಾಬ್ ಮಾದರಿಯಿಂದ ವೈರಲ್ ವಸ್ತುಗಳನ್ನು ಪ್ರತ್ಯೇಕಿಸಲು, ಆರ್‌ಎನ್‌ಎ ಗುರುತಿಸಲು ಮತ್ತು ಅದರ ಸಂಯೋಜನೆಯನ್ನು ನಿರ್ಧರಿಸಲು ಜೀನೋಮ್ ಸೀಕ್ವೆನ್ಸಿಂಗ್ ಅನುವು ಮಾಡಿಕೊಡುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯು ಸೋಂಕಿಗೆ ಒಳಗಾಗಿರುವ ಕೊರೊನಾವೈರಸ್ ನಿಖರವಾದ ರೂಪಾಂತರವನ್ನು ಗುರುತಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿನ ಸಾಮಾನ್ಯ ಕೋವಿಡ್ -19 ಪರಿಸ್ಥಿತಿಯ ಕುರಿತು ಮಾತನಾಡಿದ ಕೇಂದ್ರ ಸಚಿವ ಮನ್ಸುಖ್ ಮಾಂಡವಿಯಾ,'ಕೋವಿಡ್ -19 ನಿಯಂತ್ರಣದಲ್ಲಿದೆ, ಆದರೆ ಹೋಗಿಲ್ಲ. ದೇಶಾದ್ಯಂತ ಇದುವರೆಗೆ 124 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಓಮಿಕ್ರಾನ್ ರೂಪಾಂತರ ವೈರಸ್ ಅಪಾಯವನ್ನು ಎದುರಿಸುತ್ತಿರುವ ರಾಷ್ಟ್ರಗಳಿಂದ ಜನರು ಮತ್ತೆ ತವರಿಗೆ ವಾಪಸ್ ಆಗುತ್ತಿದ್ದಾರೆ. ಇಂಥವರ ಮೇಲೆ ರಾಜ್ಯ ಸರ್ಕಾರಗಳು ಕಣ್ಣಿರಿಸಬೇಕು, ಗೃಹ ದಿಗ್ಬಂಧನಕ್ಕೆ ಒಳಗಾಗುವಂತೆ ನೋಡಿಕೊಳ್ಳಬೇಕು. "ಎಂಟನೇ ದಿನದ ಮರುಪರೀಕ್ಷೆಯ ನಂತರ ನೆಗೆಟಿವ್ ವರದಿ ಬರುವವರೆಗೂ ರಾಜ್ಯ ಸರ್ಕಾರವು ಆರೋಗ್ಯದ ಬಗ್ಗೆ ಮೇಲ್ವಿಚಾರಣೆ ಮಾಡುತ್ತದೆ. "ಅಪಾಯದಲ್ಲಿರುವ" ದೇಶಗಳ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ ವರದಿ ಬರುವವರೆಗೆ ವಿಮಾನ ನಿಲ್ದಾಣಗಳಲ್ಲಿ ಕಾಯಲು ಸಲಹೆ ನೀಡಬೇಕು. "ಕನೆಕ್ಟಿಂಗ್ ಫ್ಲೈಟ್‌ಗಳನ್ನು ಬುಕ್ ಮಾಡಬೇಡಿ" ಎಂದು ರಾಜ್ಯಗಳಿಗೆ ತಿಳಿಸಲಾಗಿದೆ.
ದೇಶದಲ್ಲಿ ಓಮಿಕ್ರಾನ್ ಸೋಂಕಿನ ಕುರಿತು ಮುನ್ನೆಚ್ಚರಿಕೆಯಾಗಿ ಹಲವು ರಾಜ್ಯಗಳು ತಮ್ಮದೇ ಆಗಿರುವ ನಿರ್ಬಂಧಗಳನ್ನು ಹಾಕಿಕೊಳ್ಳುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಜೊತೆಗೆ ಸೋಂಕಿನ ಪರೀಕ್ಷೆ ಹಾಗೂ ಜಿನೋಮ್ ಸೀಕ್ವೆನ್ಸಿಂಗ್ ಅನ್ನು ಹೆಚ್ಚಿಸುವಂತೆ ಸೂಚನೆ ನೀಡಲಾಗಿದೆ. ಹೆಚ್ಚುವರಿಯಾಗಿ, ವಾಣಿಜ್ಯ ಅಂತರಾಷ್ಟ್ರೀಯ ವಿಮಾನಗಳ ಪುನರಾರಂಭದ ವಿಷಯದಲ್ಲಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಆರೋಗ್ಯ ಸಚಿವಾಲಯವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, 'ಅಪಾಯದಲ್ಲಿರುವ' ದೇಶಗಳಿಂದ ಆಗಮಿಸುವ ಪ್ರಯಾಣಿಕರು ಭಾರತಕ್ಕೆ ಪ್ರವೇಶಿಸಿದ ನಂತರ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗುವುದನ್ನು ಕಡ್ಡಾಯಗೊಳಿಸಲಾಗಿದೆ.