ಕಾಸರಗೋಡು: ಪಾಲಾಯಿ ವಾಟರ್ ಡಿಫೆನ್ಸ್ ರೆಗ್ಯುಲೇಟರ್ ಕಮ್ ಬ್ರಿಡ್ಜ್ ನ್ನು ಇಂದು(ಡಿಸೆಂಬರ್ 26) ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಾಡಿಗೆ ಹಸ್ತಾಂತರಿಸುವರು. ಜಲಸಂಪನ್ಮೂಲ ಸಚಿವ ರೋಶಿ ಆಗಸ್ಟಿನ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕ ಇ ಚಂದ್ರಶೇಖರನ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಭಾಗವಹಿಸಲಿದ್ದಾರೆ. ನೀಲೇಶ್ವರ ನಗರಸಭೆಯ ಪಾಲಾಯಿ ಹಾಗೂ ಕೈಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ನ ಕೂಕೋಟ್ ನ್ನು ಪರಸ್ಪರ ಸಂಪರ್ಕಿಸುವ ಯೋಜನೆ ಇದಾಗಿದ್ದು ಬೇಸಿಗೆಯ ಉಬ್ಬರವಿಳಿತದ ಸಮಯದಲ್ಲಿ ಅರಬ್ಬಿ ಸಮುದ್ರದಿಂದ ಉಪ್ಪುನೀರಿನ ಒಳಹರಿವು ತಡೆಯುವ ಮೂಲಕ 4865 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ನೀಲೇಶ್ವರ ನಗರಸಭೆ, ಕಿನಾನೂರು-ಕರಿಂದಳ, ವೆಸ್ಟ್ ಎಳೇರಿ, ಈಸ್ಟ್ ಎಳೇರಿ, ಕೈಯೂರು-ಚೀಮೇನಿ ಮತ್ತು ಚೆರುವತ್ತೂರು ಗ್ರಾಮ ಪಂಚಾಯತ್‍ಗಳಿಗೆ ನೀರಾವರಿ ಸೌಲಭ್ಯಗಳು, ಕುಡಿಯುವ ನೀರು ಮತ್ತು ಸಾರಿಗೆ ಸೌಲಭ್ಯಗಳನ್ನು ಒದಗಿಸುತ್ತದೆ.
ನಿಯಂತ್ರಕವು 12 ಮೀ ಉದ್ದದ 14 ಸ್ಪ್ಯಾನ್‍ಗಳನ್ನು ಹೊಂದಿದೆ, 2 ಸ್ಪ್ಯಾನ್‍ಗಳು 7.5 ಮೀ ಉದ್ದ ಮತ್ತು 12 ಮೀ ಅಗಲದ ಸ್ಪ್ಯಾನ್ ಜೊತೆಗೆ ಜಲ ಸಾರಿಗೆಗೆ ಸೂಕ್ತವಾದ ದಾರಿ ಹೊಂದಿದೆ. 2.75 ಮೀ ಶೇಖರಣಾ ಸಾಮಥ್ರ್ಯದೊಂದಿಗೆ, ಈ ನಿಯಂತ್ರಕವು ಸುಮಾರು 2 ಮಿಲಿಯನ್ ಘನ ಮೀಟರ್ ನೀರನ್ನು ಸಂಗ್ರಹಿಸಬಹುದು. ಈ ರಚನೆಯನ್ನು ಪೂರ್ಣಗೊಳಿಸುವುದರೊಂದಿಗೆ, ಉಪ್ಪುನೀರಿನ ಒಳಹರಿವು ತಡೆಗಟ್ಟಬಹುದು ಮತ್ತು 18 ಕಿ.ಮೀ ವರೆಗೆ ಶುದ್ಧ ನೀರನ್ನು ಭದ್ರಪಡಿಸಬಹುದು.
ಈ ವ್ಯವಸ್ಥೆಯಿಂದ ವರ್ಷಗಳ ಹಿಂದೆ ಇದ್ದ ನೀಲೇಶ್ವರ-ಕೈಯ್ಯೂರು ಬೋಟ್ ಸೇವೆಯನ್ನು ಆಧುನಿಕ ಪ್ರವಾಸೋದ್ಯಮ ಯೋಜನೆಗಳಿಗೆ ತಕ್ಕಂತೆ ಮರುಸ್ಥಾಪಿಸಬಹುದು. ಜಲಮೂಲಗಳ ಆಕರ್ಷಕ ನಿಸರ್ಗ ಸೌಂದರ್ಯ ಹಾಗೂ ಆಕರ್ಷಣೆಯನ್ನು ಬಳಸಿಕೊಂಡು ಪ್ರವಾಸೋದ್ಯಮ ಜಾಲಕ್ಕೆ ಯೋಜನೆ ರೂಪಿಸಲಾಗುತ್ತಿದೆ.