ರಾಯ್ಪುರ: ಬಿದಿರನ್ನು ಬಳಸಿಕೊಂಡು ಕರಕುಶಲ ವಸ್ತುಗಳನ್ನು ತಯಾರಿಸುತ್ತಾರೆ. ವಸ್ತುಪ್ರದರ್ಶನಗಳಲ್ಲಿ ಅದನ್ನು ನಾವು ಕಾಣಬಹುದು. ನಕ್ಸಲ್ ಚಟುವಟಿಕೆಗಳಿಗೆ ಕುಖ್ಯಾತಿ ಪಡೆದ ಚತ್ತೀಸ್ ಗಢದ ಜಗ್ದಾಲ್ಪುರದಲ್ಲಿ ಪರಿಣತರು 'ಬ್ಯಾಂಬೂಕಾ' ಎನ್ನುವ ಬಿದಿರಿನ ಸೈಕಲ್ ತಯಾರಿಸುವುದರ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಸ್ಥಳೀಯ ಬುಡಕಟ್ಟು ಜನರ ಸಹಾಯದಿಂದ ಈ ಬಿದಿರಿನ ಸೈಕಲ್ ತಯಾರಾಗಿದೆ ಎನ್ನುವುದು ವಿಶೇಷ. ಜೀವನನಿರ್ವಹಣೆಗೆ ಬಿದಿರಿನ ವಸ್ತುಗಳನ್ನು ಮಾಡುತ್ತಿದ್ದ ಇಲ್ಲಿನ ಮಂದಿ ಕೊರೊನಾ ಕಾರಣದಿಂದ ತೀವ್ರ ಸಂಕಷ್ಟವನ್ನು ಎದುರಿಸಿದ್ದರು.
ಬಿದಿರಿನ ಸೈಕಲ್ ನಿರ್ಮಾಣದ ಹಿಂದೆ ನ್ಯಾಚುರೋಸ್ಕೋಪ್ ಎನ್ನುವ ಸ್ವಸಹಾಯ ಸಂಘಟನೆ ಕಾರ್ಯನಿರ್ವಹಿಸಿದೆ. ಸಂಘಟನೆಯ ನೆರವಿನಿಂದ ಬುಡಕಟ್ಟು ಜನರು ಬಿದಿರಿನ ಸೈಕಲ್ ತಯಾರಾಗಿದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಸೈಕಲ್ಲುಗಳಿಗೆ ಹೋಲಿಸಿದರೆ ಬಿದಿರಿನ ಸೈಕಲ್ ಅವುಗಳಿಗಿಂತ ಶೇ.60 ಪ್ರತಿಶತ ಕಡಿಮೆ ತೂಕವನ್ನು ಹೊಂದಿದೆ. ಬಿದಿರಿನ ಸೈಕಲ್ ಭಾರ 8.2 ಕೆ.ಜಿ.
ಈ ಸೈಕಲ್ ಬೆಲೆ 35,000 ರೂ.ಗಳಾಗಿದೆ. ಬೆಲೆ ದುಬಾರಿಯಾಯಿತು ಎನ್ನುವುದನ್ನು ಒಪ್ಪಿಕೊಳ್ಳುವ ನ್ಯಾಚುರೊಸ್ಕೋಪಿ ಕಾರ್ಯಕರ್ತರು ಅದಕ್ಕೆ ಕಾರಣವನ್ನೂ ನೀಡುತ್ತಾರೆ.
ಒಂದು ಬಿದಿರಿನ ಸೈಕಲ್ ತಯಾರಾಗಲು 20 ದಿನಗಳು ತಗುಲುತ್ತವೆ. ಬಿದಿರನ್ನು ಕೆಮಿಕಲ್ ಬಳಸಿ ದೀರ್ಘ ಬಾಳಿಕೆಗೆ ತಕ್ಕಂತೆ ಪರಿಷ್ಕರಣೆಗೆ ಒಳಪಡಿಸಲಾಗುತ್ತದೆ.