ಮುಂಬೈ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ವಾರದ ಆರಂಭದ ದಿನ ಸೋಮವಾರ ಆಘಾತವುಂಟಾಗಿದೆ. ಷೇರು ಮಾರುಕಟ್ಟೆಯ ಸೂಚ್ಯಂಕ- ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ- ಸೋಮವಾರದ ಆರಂಭಿಕ ವಹಿವಾಟಿನ ಸಮಯದಲ್ಲಿ ಶೇಕಡಾ 2.3ಕ್ಕಿಂತ ಕೆಳಗೆ ಕುಸಿಯಿತು.
ಇಂದು ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ 1200 ಪಾಯಿಂಟ್ ಗಳಷ್ಟು ಕುಸಿದು 55 ಸಾವಿರದ 810ರಲ್ಲಿ ವಹಿವಾಟು ನಡೆಸಿದರೆ ನಿಫ್ಟಿ 50 ಸೂಚ್ಯಂಕಕ್ಕಿಂತ ಕೆಳಗೆ 366 ಅಂಕಗಳಷ್ಟು ಇಳಿಕೆ ಕಂಡುಬಂದು 16 ಸಾವಿರದ 618ರಲ್ಲಿ ವಹಿವಾಟು ನಡೆಸುತ್ತಿತ್ತು.
ಇಂದಿನ ಷೇರು ಮಾರುಕಟ್ಟೆಯ ವಹಿವಾಟಿನ ಬಗ್ಗೆ ವಿಶ್ಲೇಷಿಸಿರುವ ಕ್ಯಾಪಿಟಲ್ವಿಯ ಗ್ಲೋಬಲ್ ರಿಸರ್ಚ್ ನ ಮುಖ್ಯ ಸಂಶೋಧಕ ಗೌರವ್ ಗಾರ್ಗ್, ವಿಶ್ವಾದ್ಯಂತ ಹೆಚ್ಚುತ್ತಿರುವ ಓಮಿಕ್ರಾನ್ ಕೊರೋನ ವೈರಸ್ ಪ್ರಕರಣಗಳ ಮಧ್ಯೆ ಇಂದಿನ ಆರಂಭದ ವಹಿವಾಟಿನಲ್ಲಿ ಸಾಕಷ್ಟು ಇಳಿಕೆ ಕಂಡುಬಂದಿದೆ. ವಿದೇಶಿ ಬಂಡವಾಳ ಹೂಡಿಕೆದಾರರು (ಎಫ್‌ಪಿಐಗಳು) ಡಿಸೆಂಬರ್ ತಿಂಗಳಿನಲ್ಲಿ ಇಲ್ಲಿಯವರೆಗೆ ಭಾರತೀಯ ಮಾರುಕಟ್ಟೆಗಳಿಂದ 17,696 ಕೋಟಿಯಷ್ಟು ಗಳಿಸಿದ್ದಾರೆ. ಆರ್‌ಬಿಐ ಅಂಕಿಅಂಶಗಳು ಸತತ ಮೂರನೇ ವಾರದಲ್ಲಿ ಭಾರತದ ವಿದೇಶೀ ವಿನಿಮಯ ಸಂಗ್ರಹದಲ್ಲಿ ಕುಸಿತವನ್ನು ತೋರಿಸಿದೆ.
ಷೇರು ಮಾರುಕಟ್ಟೆಯಲ್ಲಿ 16 ಸಾವಿರದ 350ರ ಮಟ್ಟದಲ್ಲಿ ಬೆಂಬಲ ಮಟ್ಟದಲ್ಲಿ ಹಾಗೂ ಅದಕ್ಕಿಂತ ಹೆಚ್ಚು ತೋರಿಸದಿದ್ದರೆ 16 ಸಾವಿರದಿಂದ 16 ಸಾವಿರದ 100ರಲ್ಲಿ ವಹಿವಾಟು ನಡೆಸಬಹುದಷ್ಟೆ. ಇನ್ನು ಕೆಲ ದಿನಗಳವರೆಗೆ ಷೇರು ಸಂವೇದಿ ಸೂಚ್ಯಂಕ ಈ ರೀತಿ ಕುಸಿತ ಕಂಡುಬರಬಹುದು ಎನ್ನುತ್ತಾರೆ.
ಓಮಿಕ್ರಾನ್ ಕೊರೋನಾ ರೂಪಾಂತರಿಯಿಂದ ಕೆಲವು ಐರೋಪ್ಯ ದೇಶಗಳು ಲಾಕ್ ಡೌನ್ ನಂತಹ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿವೆ. ಭಾರತದಲ್ಲಿ ಇದುವರೆಗೆ 150ಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿದ್ದು, ಚಳಿ ವಾತಾವರಣ ಇನ್ನಷ್ಟು ಹೆಚ್ಚಾಗುವುದರಿಂದ ಮುಂದಿನ ದಿನಗಳಲ್ಲಿ ಸೋಂಕು ಇನ್ನಷ್ಟು ಹೆಚ್ಚಾಗಬಹುದೆಂದು ಆರೋಗ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ, ಪ್ರಾಪರ್ಟಿ ಡೆವಲಪರ್-ಶ್ರೀರಾಮ್ ಪ್ರಾಪರ್ಟೀಸ್ ನ ಷೇರುಗಳ ವಿತರಣೆ ಬೆಲೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ 94 ರೂಪಾಯಿ(ವಿತರಣೆ ಬೆಲೆ-118) ಶೇಕಡಾ 20ರ ರಿಯಾಯಿತಿಯಲ್ಲಿ ಪಟ್ಟಿಯಾಗಿದೆ.