ಬಲರಾಮ್ ಪುರ: ತಮಿಳುನಾಡಿನ ಹೆಲಿಕಾಪ್ಟರ್ ದುರಂತದಲ್ಲಿ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ಪ್ರಾಣ ಉಳಿಸಲು ವೈದ್ಯರು ತೀವ್ರ ಪ್ರಯತ್ನ ನಡೆಸುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಬಲರಾಮ್ ಪುರದಲ್ಲಿಂದು ಸರಯೂ ನಹರ್ ರಾಷ್ಟ್ರೀಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ವರುಣ್ ಸಿಂಗ್ ಅವರ ಜೀವ ಉಳಿಸಲು ಪತೇಶ್ವರಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ. ಇಡೀ ದೇಶ ವರುಣ್ ಸಿಂಗ್ ಕುಟುಂಬದೊಂದಿಗೆ ಇದೆ. ಹೆಲಿಕಾಪ್ಟರ್ ದುರಂತದ ಮೃತಪಟ್ಟ ವೀರ ಯೋಧರ ಕುಟುಂಬದೊಂದಿಗೂ ಇಡೀ ದೇಶ ಇದೆ. ದೇಶವನ್ನು ಮತ್ತಷ್ಟು ಪ್ರಬಲ ಹಾಗೂ ಸೌಹಾರ್ದಯುತ ರಾಷ್ಟ್ರವನ್ನಾಗಿ ಮಾಡಬೇಕಾಗಿದೆ ಎಂದರು.
ದೇಶ ದು:ಖದಲ್ಲಿದೆ ಆದರೆ, ಈ ನೋವಿನ ಹೊರತಾಗಿಯೂ ನಮ್ಮ ಅಭಿವೃದ್ಧಿಅಥವಾ ನಮ್ಮ ವರ್ಚಸ್ಸನ್ನು ತಡೆಯಬಾರದು, ಭಾರತೀಯರಾದ ನಾವು ದಕ್ಷತೆಯಿಂದ ಕೆಲಸ ಮಾಡಬೇಕು ಮತ್ತು ದೇಶದ ಒಳಗೆ ಹಾಗೂ ಹೊರಗಿನ ಪ್ರತಿಯೊಂದು ಸವಾಲನ್ನು ಎದುರಿಸಬೇಕು, ಜನರಲ್ ಬಿಪಿನ್ ರಾವತ್ ಮುಂದಿನ ಜನ್ಮದಲ್ಲಿ ಬಂದರೆ, ಹೊಸ ಸುಧಾರಣೆಯೊಂದಿಗೆ ಮುನ್ನಡೆಯುತ್ತಿರುವುದನ್ನು ಅವರು ನೋಡಬೇಕು ಎಂದು ಹೇಳಿದರು.
ಸೈನಿಕರು ಜೀವನ ಪೂರ್ತಿ ಯೋಧರಾಗಿಯೇ ಇರುತ್ತಾರೆ. ಅವರು ಪ್ರತಿಯೊಂದು ಕ್ಷಣದಲ್ಲಿಯೂ ದೇಶದ ಹೆಮ್ಮೆಯಾಗಿರುತ್ತಾರೆ ಎಂದು ಹೇಳಿದ ಪ್ರಧಾನಿ ಮೋದಿ, ಡಿಸೆಂಬರ್ 9 ರಂದು ತಮಿಳುನಾಡಿನ ಕುನೂರಿನಲ್ಲಿ ಸಂಭವಿಸಿದ್ದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ವೀರ ಯೋಧರಿಗೆ ಕಂಬನಿ ಮಿಡಿದರು. ಸಿಡಿಎಸ್ ಜನರಲ್ ಬಿಪಿನ್ ರಾವತ್ ಸಾವು, ಪ್ರತಿಯೊಬ್ಬ ದೇಶಭಕ್ತನಿಗೂ ನಷ್ಟವಾಗಿದೆ. ಅವರು ಧೈರ್ಯಶಾಲಿ ಮತ್ತು ದೇಶದ ಸಶಸ್ತ್ರ ಪಡೆಗಳನ್ನು ಸ್ವಾವಲಂಬಿಯನ್ನಾಗಿ ಮಾಡಲು ಶ್ರಮಿಸಿದರು, ಅದಕ್ಕೆ ರಾಷ್ಟ್ರವು ಸಾಕ್ಷಿಯಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.