ನವದೆಹಲಿ: ಖ್ಯಾತ ಅಸ್ಸಾಮಿ ಕವಿ ಹಾಗೂ ಸಾಹಿತಿ ನೀಲ್ಮಣಿ ಫೂಕನ್ ಅವರು ಭಾರತದ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ವರ್ಷ 56ನೇ ಜ್ಞಾನಪೀಠ ಪ್ರಶಸ್ತಿಗೆ ನೀಲ್ಮಣಿ ಫೂಕನ್ ಆಯ್ಕೆ ಆಗಿದ್ದಾರೆ. ನೀಲ್ಮಣಿ ಫೂಕನ್ ಜೊತೆಗೆ ಕೊಂಕಣಿ ಬರಹಗಾರ ದಾಮೋದರ್ ಮೌಜೊ ಕೂಡ ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರತಿಷ್ಠಿತ ಕವಿ ನೀಲ್ಮಣಿ ಫೂಕನ್ ಅಸ್ಸಾಂನ ಜೋರ್ಹತ್ ಬಳಿಯ ದೇರ್ಗಾಂವ್ನಲ್ಲಿ ಜನಿಸಿದರು. ವಿಶೇಷವಾಗಿ ಇವರು ಭಾಷೆ ಮತ್ತು ಕಲಾತ್ಮಕ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಹೀಗಾಗಿ ನೀಲ್ಮಣಿ ಶ್ರೀಮಂತ ಜಾನಪದ ಸಂಸ್ಕೃತಿ ಮತ್ತು ಸ್ಥಳೀಯ ಜೀವನದ ಬದಲಾವಣೆಗಳಲ್ಲಿ ತೀವ್ರ ಆಸಕ್ತಿ ಬೆಳೆಸಿಕೊಂಡಿದ್ದರು. ಅವರು ಅಸ್ಸಾಂನ ಪ್ರಮುಖ ಕಲಾ ತಜ್ಞರು ಮತ್ತು ಬುಡಕಟ್ಟು ಹಾಗೂ ಜಾನಪದ ಕಲೆಯ ಪ್ರಜ್ಞಾಪೂರ್ವಕ ವಿಮರ್ಶಕರಲ್ಲಿ ಒಬ್ಬರಾಗಿದ್ದಾರೆ.
ಖ್ಯಾತ ಕವಿ ಎನಿಸಿಕೊಂಡಿರುವ ನೀಲ್ಮಣಿ ಫೂಕನ್ ಅವರು ಐವತ್ತರ ದಶಕದಲ್ಲಿ ಕವನಗಳನ್ನು ಬರೆಯಲು ಪ್ರಾರಂಭಿಸಿದರು. ಆದಾಗ್ಯೂ, ಯುದ್ಧ ನಂತರದಲ್ಲಿ ಅವಧಿಯಲ್ಲಿ ವಿಶಿಷ್ಟ ಕವಿಗಳ ಸಾಲಿನಲ್ಲಿ ಅವರನ್ನು ಗುರುತಿಸಲಾಯಿತು. ಅಸ್ಸಾಮಿ ಕಾವ್ಯದಲ್ಲಿ ಆಧುನಿಕತಾವಾದದ ಪ್ರವರ್ತಕರಲ್ಲಿ ಒಬ್ಬರೆಂದು ನೀಲ್ಮಣಿ ಪೂಕನ್ ಗುರುತಿಸಿಕೊಂಡರು.
ಕಳೆದ 1981ರಲ್ಲಿ ನೀಲ್ಮಣಿ ಪೂಕನ್ ಅವರ ಕವಿತಾ (ಕೋಬಿತಾ) ಕವನ ಸಂಕಲನಕ್ಕಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನೀಡಲಾಯಿತು. 1990ರಲ್ಲಿ ಪೂಕನ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಗಿದ್ದು, 2002ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್ ಪಡೆದುಕೊಂಡರು.