ಪೆರ್ಲ: ಕೋವಿಡ್ ನಿಯಂತ್ರಣ ಮತ್ತೆ ಬಿಗುಗೊಳ್ಳುತ್ತಿದ್ದಂತೆ ಗಡಿಭಾಗದ ಜನತೆ ಸಂಕಷ್ಟ ಹೆಚ್ಚಲಾರಂಭಿಸಿದೆ. ಕಾಸರಗೋಡು ಜಿಲ್ಲೆಯಲ್ಲಿ ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಸಾರಡ್ಕ ಚೆಕ್‍ಪೋಸ್ಟ್ ಮತ್ತೆ ಸುದ್ದಿಗೆ ಗ್ರಾಸವಾಗುತ್ತಿದೆ. ಎಣ್ಮಕಜೆ ಪಂಚಾಯಿತಿಯ ಒಂದನೇ ವಾರ್ಡು ಸಾಯ, ಚವರ್ಕಾಡು ಪ್ರದೇಶಕ್ಕೆ ಪೆರ್ಲದಿಂದ ತೆರಳಬೇಕಾದರೆ ಸಾರಡ್ಕ ಚೆಕ್‍ಪೋಸ್ಟ್ ದಾಟಿ ಸಾಗಬೇಕದುದು ಅನಿವಾರ್ಯವಾಗಿದೆ.
ಕನಾಟಕ ಸರ್ಕಾರದ ಕಟ್ಟುನಿಟ್ಟಿನ ಆದೇಶದನ್ವಯ ಇಲ್ಲಿ ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದ್ದು, ವರದಿ ಹೊಂದಿರದ ಪ್ರಯಾಣಿಕರನ್ನು ತಪಾಸಣೆ ನಡೆಸಿಯೇ ಮುಂದಕ್ಕೆ ಬಿಡಲಾಗುತ್ತಿದೆ. ಇನ್ನು ಕೇರಳ ನಿವಾಸಿಗಳು ಅಡ್ಯನಡ್ಕ, ಸಾಯ, ಚವರ್ಕಾಡು ಪ್ರದೇಶದಲ್ಲಿ ವಾಸ್ತವ್ಯ ಹೊಂದಿದ್ದು, ಕೆಲವೊಮ್ಮೆ ಇವರ ಗುರುತಿನ ಚೀಟಿ ಆಧಾರದಲ್ಲಿ ತಪಾಸಣೆಯಿಲ್ಲದೆ ಬಿಡಲಾಗುತ್ತಿದೆ. ಈ ಪ್ರದೇಶದ ಜನತೆಗೆ ರೇಶನ್, ಬ್ಯಾಂಕ್, ಅಂಚೆ, ಪಂಚಾಯಿತಿ ಸೇರಿದಂತೆ ನಾನಾ ಕಚೇರಿಗಳಿಗೆ ತೆರಳಬೇಕಾದರೆ ಸಾರಡ್ಕ ಗಡಿ ದಾಟಿಯೇ ತೆರಳಬೇಕಾಗಿದ್ದು, ಪ್ರತಿ ಬಾರಿ ಆರ್‍ಟಪಿಸಿಅರ್ ನೆಗೆಟಿವ್ ವರದಿ ಹಾಜರುಪಡಿಸುವುದು ಸಮಸ್ಯೆಗೆ ಕಾರಣವಾಗುತ್ತಿದೆ. ಅಂತಾರಾಜ್ಯ ಸಂಚಾರದ ಬಸ್‍ಗಳಿಗೆ ಯಾವುದೇ ನಿಯಂತ್ರಣ ಹೇರದಿದ್ದರೂ, ಸಾರಡ್ಕ ಚೆಕ್‍ಪೋಸ್ಟ್ ದಾಟಿ ಕರ್ನಾಟಕ ಸಾಗುವವರು ಕಡ್ಡಾಯ ಅರ್‍ಟಿಪಿಸಿಆರ್ ನೆಗೆಟಿವ್ ವರದಿ ಜತೆಯಲ್ಲಿರಿಸಿಕೊಳ್ಳಬೇಕಾಗಿದೆ.
ತಪಾಸಣಾ ಕೇಂದ್ರ:
ಆರ್‍ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರದ ಪ್ರಯಾಣಿಕರಿಗೆ ಚೆಕ್‍ಪೋಸ್ಟ್‍ನಲ್ಲಿ ತಪಾಸಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ತಪಾಸಣೆ ನಡೆಸಿ, ಮೊಬೈಲ್ ಸಂಖ್ಯೆ ದಾಖಲಿಸಿ ಇವರನ್ನು ಮುಂದಕ್ಕೆ ಬಿಡಲಾಗುತ್ತಿದೆ. ಆರೋಗ್ಯ ಇಲಾಖೆ ಹಾಗೂ ಪೊಲೀಸರು ಇಲ್ಲಿ ನಿರಂತರ ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಶಾಸಕ ಮನವಿ:
ಕೇರಳದಲ್ಲಿ ಕೋವಿಡ್ ಹರಡುವಿಕೆ ಇಳಿಮುಖ ಕಾಣುತ್ತಿದ್ದರೂ, ಗಡಿಯಲ್ಲಿ ಮತ್ತೆ ನಿಯಂತ್ರಣ ಏರ್ಪಡಿಸಿರುವುದರಿಂದ ಜನತೆ ಸಮಸ್ಯೆ ಎದುರಿಸುತ್ತಿದ್ದು, ಈ ಬಗ್ಗೆ ಮಧ್ಯ ಪ್ರವೇಶಿಸುವಂತೆ ರಾಜ್ಯಪಾಲ ಆರಿಫ್‍ಮಹಮ್ಮದ್ ಖಾನ್ ಹಾಗೂ ಮುಖ್ಯ ಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಮನವಿ ಸಲ್ಲಿಸಿದ್ದಾರೆ. ಆಸ್ಪತ್ರೆ, ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಅಗತ್ಯಗಳಿಗಾಗಿ ಗಡಿನಾಡು ಕಾಸರಗೋಡಿನಿಂದ ನಿತ್ಯ ಕರ್ನಾಟಕ ಸಂಚರಿಸಬೇಕಾಗುತ್ತಿದ್ದು, ಗಡಿಯಲ್ಲಿನ ನಿರ್ಬಂಧ ತೆರವುಗೊಳಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.