ಮಂಜೇಶ್ವರ: ವರ್ಕಾಡಿ ತೌಡುಗೋಳಿ ಬಳಿಯ ಶಾಂತಿಪಳಿಕೆ ಬದಿಯಾರು ಎಂಬಲ್ಲಿ ಶತಮಾನಗಳ ಹಿಂದಿನ ದೇವಾಲಯದ ಕುರುಹು ಪತ್ತೆಯಾಗಿ ಅಚ್ಚರಿಗೆ ಕಾರಣವಾಗಿದೆ.
ಇಲ್ಲಿಯ ಸ್ಥಳೀಯ ನಿವಾಸಿ ನವೀನ್ ಶೆಟ್ಟಿ ಎಂಬವರ ಸ್ವಾಧೀನದಲ್ಲಿರುವ ನಿವೇಶನದಲ್ಲಿ ಕ್ಷೇತ್ರದ ಕುರುಹು ಪತ್ತೆಯಾಗಿದೆ.ಇದು ಸುಮಾರು 800 ವರ್ಷಗಳಷ್ಟು ಹಿಂದೆ ಇದ್ದ ಶ್ರೀಉಮಾಮಹೇಶ್ವರ ದೇವಸ್ಥಾನದ ಕುರುಹುಗಳಾಗಿರಬೇಕೆಂದು ಅಂದಾಜಿಸಲಾಗಿದೆ.
ಇತ್ತೀಚೆಗೆ ಇದೇ ಪರಿಸರದಲ್ಲಿ ನಡೆದ ಜ್ಯೋತಿಷ್ಯ ಚಿಂತನಾ ಪ್ರಶ್ನೆಯೊಂದರಲ್ಲಿ ಕ್ಷೇತ್ರವೊಂದು ಇರಬೇಕಿತ್ತೆಂದು ತಿಳಿದುಬಂದ ಹಿನ್ನೆಲೆಯಲ್ಲಿ ಪೊದೆಗಳಿಂದಾವೃತವಾದ ಸ್ಥಳದಲ್ಲಿ ಹುಡುಕಾಟ ನಡೆಸಿದಾಗ ಕ್ಷೇತ್ರವಿದ್ದ ಈ ಸ್ಥಳ ಪತ್ತೆಯಾಗಿದೆ. ಇಲ್ಲಿ ಸಿಂಹದ ಮುಖವನ್ನು ಹೋಲುವ ಶಿಲೆಯೊಂದು ಲಭಿಸಿದೆ. ಜೊತೆಗೆ ಇದೇ ಪರಿಸರದಲ್ಲಿ ದೇವಾಲಯದ ಕೆರೆಯನ್ನು ಹೋಲುವ ಪ್ರಾಚೀನ ಕೆರೆಯೂ ಇರುವುದು ದೇವಾಲಯದ ಇರುವಿಕೆಯನ್ನು ಪುಷ್ಠೀಕರಿಸಿದೆ.
ಅಭಿಮತ:
ಸುತ್ತಮುತ್ತಲಿನ ಯಾವುದೇ ಪ್ರಶ್ನೆ ಚಿಂತನೆಗಳಲ್ಲಿ ದೇವಾಲಯದ ಇರುವಿಕೆಯ ಬಗ್ಗೆ ಹಲವು ಕಾಲಗಳಿಂದ ಸೂಚನೆಗಳು ಲಭಿಸುತ್ತಿತ್ತು. ಆದರೆ ಇತ್ತೀಚೆಗೆ ಈ ಬಗ್ಗೆ ಹುಡುಕಾಟ ನಡೆಸಿದಾಗ ನವೀನ್ ಶೆಟ್ಟಿ ಎಂಬವರ ಖಾಸಗೀ ಸ್ಥಳದಲ್ಲಿ ಪೊದೆಗಳಿಂದಾವೃತವಾದ ಪ್ರದೇಶದಲ್ಲಿ ಇಂತಹ ಕುರುಹು ಪತ್ತೆಯಾಯಿತು. ಇದೇ ಪರಿಸರದ ಕೆರೆಯ ಬಗ್ಗೆ ಕಳೆದ ಕೆಲವು ವರ್ಷಗಳಿಂದ ಗಮನಿಸಿದ್ದು, ಸ್ಥಳೀಯ ಗಣೇಶ ವಿಗ್ರಹದ ವಿಸರ್ಜನೆಯನ್ನು ಮಾಡಲಾಗುತ್ತಿದೆ. ಇದೀಗ ಅಲ್ಲಿ ದೇವಾಲಯ ಇರುವಿಕೆ ಇರಬೇಕೆಂಬುದು ಖಾತ್ರಿಯಾಗಿದೆ. ಸ್ಥಳೀಯರನ್ನು ಒಗ್ಗೂಡಿಸಿ ಮುಂದಿನ ಕ್ರಮಗಳಿಗೆ ಉಪಕ್ರಮ ಕೈಗೊಳ್ಳಲಾಗುವುದು.
-ವಿಶ್ವನಾಥ ರೈ
ಸ್ಥಳೀಯ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ.