ನವದೆಹಲಿ: ಪ್ರತಿಪಕ್ಷಗಳ ಸಭಾತ್ಯಾಗದ ನಡುವೆ ರಾಜ್ಯಸಭೆಯ ಧ್ವನಿ ಮತದ ಅಂಗೀಕಾರದೊಂದಿಗೆ ಮಂಗಳವಾರ ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ 2021ಕ್ಕೆ ಸಂಸತ್ತು ಅನುಮೋದನೆ ನೀಡಿತು.
ನಕಲಿ ಮತದಾರರ ಸಮಸ್ಯೆಯನ್ನು ತೊಡೆದು ಹಾಕಲು ವೋಟರ್ ಐಡಿ ಜೊತೆಗೆ ಆಧಾರ್ ಕಾರ್ಡ್ ಸೇರ್ಪಡೆ ಮಾಡುವ ಮಸೂದೆ ಸೋಮವಾರ ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು.
ವಿಪಕ್ಷಗಳು ನಿರ್ಣಯದೊಂದಿಗೆ ಅದನ್ನು ಸೆಲೆಕ್ಟ್ ಕಮಿಟಿಗೆ ಕಳುಸಿಬೇಕೆಂದು ಒತ್ತಾಯಿಸಿದರು. ಆದರೆ ಅದಕ್ಕೆ ಧ್ವನಿಮತದಲ್ಲಿ ಸೋಲಾಯಿತು. ಕಾಂಗ್ರೆಸ್, ಟಿಎಂಸಿ, ಎಡಪಕ್ಷಗಳು, ಡಿಎಂಕೆ ಮತ್ತು ಎನ್ ಸಿಪಿ ಮತ್ತಿತರ ಪ್ರತಿಪಕ್ಷಗಳ ಸದಸ್ಯರು ಸದನದಿಂದ ನಿರ್ಗಮಿಸಿದರು.
ಆದರೆ, ಬಿಜೆಪಿ,ಜೆಡಿಯು, ವೈಎಸ್ ಆರ್ ಸಿಪಿ, ಎಐಎಡಿಎಂಕೆ, ಬಿಜೆಡಿ ಮತ್ತು ಟಿಎಂಸಿ- ಎಂ, ಮಸೂದೆಯನ್ನು ಬೆಂಬಲಿಸಿದ ನಂತರ ರಾಜ್ಯಸಭೆ ಅಂಗೀಕಾರ ನೀಡಿತು.