ನವದೆಹಲಿ: ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಮಿ-17 ವಿ-5(Mi-17 V-5 )ಭೀಕರ ದುರಂತಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆ ಕಲಾಪದ ಆರಂಭದಲ್ಲಿ ಹೇಳಿಕೆ ನೀಡಿದ್ದಾರೆ.
ಭಾರತೀಯ ವಾಯುಪಡೆ (ಐಎಎಫ್) ಸೇನಾ ಹೆಲಿಕಾಪ್ಟರ್ ಅಪಘಾತದ ಬಗ್ಗೆ ತ್ರಿ-ಸೇವಾ ತನಿಖೆಗೆ ಆದೇಶಿಸಲಾಗಿದೆ. ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ತನಿಖಾ ತಂಡ ನಿನ್ನೆಯೇ ವೆಲ್ಲಿಂಗ್ಟನ್ ತಲುಪಿ ತನಿಖೆ ಆರಂಭಿಸಿದೆ ಎಂದು ಸದನಕ್ಕೆ ತಿಳಿಸಿದ್ದಾರೆ.
ಹೆಲಿಕಾಪ್ಟರ್ ದುರಂತದಲ್ಲಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರನ್ನು ಹೊರತುಪಡಿಸಿ ಬೇರೆಲ್ಲರೂ ನಿಧನರಾಗಿದ್ದಾರೆ. ವರುಣ್ ಸಿಂಗ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಸ್ಥಿರವಾಗಿದೆ. ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ಅಗತ್ಯವಿದ್ದರೆ ಮಿಲಿಟರಿ ಆಸ್ಪತ್ರೆಯಿಂದ ವೆಲ್ಲಿಂಗ್ಟನ್ ಕಮಾಂಡ್ ಆಸ್ಪತ್ರೆಗೆ ವರ್ಗಾಯಿಸಲಾಗುವುದು ಎಂದರು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ವೆಲ್ಲಿಂಗ್ಟನ್‌ನ ಮಿಲಿಟರಿ ಆಸ್ಪತ್ರೆಯಲ್ಲಿ ಜೀವರಕ್ಷಕರಾಗಿದ್ದಾರೆ. ಅವರ ಜೀವ ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಅಂತಿಮ ಸಂಸ್ಕಾರವನ್ನು ಸಂಪೂರ್ಣ ಸೇನಾ ಗೌರವಗಳೊಂದಿಗೆ ನೆರವೇರಿಸಲಾಗುವುದು. ಇತರ ಸೇನಾ ಸಿಬ್ಬಂದಿಯ ಅಂತಿಮ ಸಂಸ್ಕಾರವನ್ನು ಸೂಕ್ತ ಸೇನಾ ಗೌರವದೊಂದಿಗೆ ನೆರವೇರಿಸಲಾಗುವುದು ಎಂದರು.
ಇದಕ್ಕೂ ಮೊದಲು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಗಲಿದ ಸೇನಾಧಿಕಾರಿಗಳಿಗೆ ಸದಸ್ಯರು ಎರಡು ನಿಮಿಷ ಮೌನಾಚರಣೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.