ಲಖನೌ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ವಾಕ್ಸಮರ ತೀವ್ರಗೊಂಡಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್ ಪಕ್ಷ ನೆಲೆ ಕಳೆದುಕೊಂಡಿದೆ ಎಂದು ಟೀಕಿಸುವವರಿಗೆ "ಮೇರೆ ಪಾಸ್ ಬೆಹೆನ್ ಹೈ"(ನನ್ನ ಬಳಿ ಸಹೋದರಿಯರಿದ್ದಾರೆ) ಎಂದು ತಿರುಗೇಟು ನೀಡಿದ್ದಾರೆ.
ಬಾಲಿವುಡ್ ಚಲನಚಿತ್ರ 'ದೀವಾರ್' ನ ಸಾಂಪ್ರದಾಯಿಕ ಸಂಭಾಷಣೆಯನ್ನು ನೆನಪಿಸಿಕೊಂಡ ಕಾಂಗ್ರೆಸ್ ನಾಯಕಿ, "ಮೇರೆ ಪಾಸ್ ಬೆಹೆನ್ ಹೈ"(ನನ್ನ ಬಳಿ ಸಹೋದರಿಯರಿದ್ದಾರೆ) ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊ ಕ್ಲಿಪ್‌ನಲ್ಲಿ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಯಾವುದೇ ನೆಲೆಯಿಲ್ಲದ ಕಾರಣ ರ್ಯಾಲಿಗಳಲ್ಲಿ ಮಹಿಳೆಯರ ಬಗ್ಗೆ ಮಾತನಾಡುತ್ತಿದೆ ಎಂಬ ಪ್ರತಿಸ್ಪರ್ಧಿ ಪಕ್ಷಗಳ ಟೀಕೆಗಳಿಗೆ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಅಮಿತಾಭ್ ಬಚ್ಚನ್ ಮತ್ತು ಶಶಿ ಕಪೂರ್ ಸಹೋದರರಾಗಿ ನಟಿಸಿದ ದೀವಾರ್ ಸಂಭಾಷಣೆಯನ್ನು ನೀವು ಕೇಳಿದ್ದೀರಾ ಎಂದು ಪತ್ರಕರ್ತರನ್ನು ಪ್ರಶ್ನಿಸಿದ ಪ್ರಿಯಾಂಕಾ, "ಅಮಿತಾಭ್ ಶಶಿ ಕಪೂರ್ ಅವರಿಗೆ, 'ಮೇರೆ ಪಾಸ್ ಗಾಡಿ ಹೈ, ಮೇರೆ ಪಾಸ್ ಬಂಗ್ಲೆ ಹೈ, ಯೇ ಹೈ, ವೋ ಹೈ ಎಂದು ಹೇಳುತ್ತಾರೆ. ಆದರೆ ಶಶಿ ಕಪೂರ್ ಮೇರೆ ಪಾಸ್ ಮಾ ಹೈ(ನನ್ನ ಬಳಿ ತಾಯಿ ಇದ್ದಾರೆ) ಎಂದು ಹೇಳುತ್ತಾರೆ.
ಅದೇ ರೀತಿ ನಾನು ಸಹ ಮೇರೆ ಪಾಸ್ ಬೆಹೆನ್ ಹೈ(ನನ್ನ ಬಳಿ ಸಹೋದರಿಯರಿದ್ದಾರೆ)" ಎಂದು ಉತ್ತರ ಪ್ರದೇಶದ ಮಹಿಳೆಯರನ್ನು ಉಲ್ಲೇಖಿಸಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
"ನನಗೆ ಸಹೋದರಿಯರಿದ್ದಾರೆ...ಸಹೋದರಿಯರು ರಾಜಕೀಯದಲ್ಲಿ ಬದಲಾವಣೆ ತರುತ್ತಾರೆ. ಲಡ್ಕಿ ಹೂನ್ ಲಡ್ ಸಕ್ತೀ ಹೂನ್" ಎಂದು ಹಿಂದಿಯಲ್ಲಿ ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ.
2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳಾ ಅಭ್ಯರ್ಥಿಗಳಿಗೆ ಶೇ. 40 ಮೀಸಲಾತಿಯನ್ನು ಈಗಾಗಲೇ ಘೋಷಿಸಿದೆ.