ಗುರುಗ್ರಾಮ: ಕ್ರಿಸ್‌ಮಸ್ ಹಬ್ಬದ ಹಿಂದಿನ ದಿನವಾದ ಶುಕ್ರವಾರ ಸಂಜೆ ಇಲ್ಲಿನ ಪಟೌಡಿಯ ಚರ್ಚ್ ಆವರಣಕ್ಕೆ ನುಗ್ಗಿದ ಕೆಲ ಬಲಪಂಥೀಯ ಕಾರ್ಯಕರ್ತರು, ಪ್ರಾರ್ಥನೆಗೆ ಅಡ್ಡಿಪಡಿಸಿರುವ ಘಟನೆ ನಡೆದಿದೆ.
ಗುರುಗ್ರಾಮ: ಕ್ರಿಸ್‌ಮಸ್ ಹಬ್ಬದ ಹಿಂದಿನ ದಿನವಾದ ಶುಕ್ರವಾರ ಸಂಜೆ ಇಲ್ಲಿನ ಪಟೌಡಿಯ ಚರ್ಚ್ ಆವರಣಕ್ಕೆ ನುಗ್ಗಿದ ಕೆಲ ಬಲಪಂಥೀಯ ಕಾರ್ಯಕರ್ತರು, ಪ್ರಾರ್ಥನೆಗೆ ಅಡ್ಡಿಪಡಿಸಿರುವ ಘಟನೆ ನಡೆದಿದೆ.
ಈ ಕುರಿತ ವಿಡಿಯೊ ವೈರಲ್ ಆಗಿದೆ. ಚರ್ಚ್ ಆವರಣಕ್ಕೆ ನುಗ್ಗಿದ ಕೆಲ ಪುರುಷರು 'ಜೈ ಶ್ರೀರಾಮ್' ಮತ್ತು 'ಭಾರತ್ ಮಾತಾ ಕಿ ಜೈ' ಎಂದು ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೆ ವೇದಿಕೆ ಮೇಲಿದ್ದ ಸಂಗೀತ ತಂಡದ ಸದಸ್ಯರನ್ನು ವೇದಿಕೆಯಿಂದ ಕೆಳಕ್ಕೆ ತಳ್ಳಿ, ಮೈಕ್‌ಗಳನ್ನು ಕಸಿದುಕೊಂಡು ಗದ್ದಲ ಎಬ್ಬಿಸಿರುವುದು ವಿಡಿಯೊದಲ್ಲಿ ದಾಖಲಾಗಿದೆ.
'ಚರ್ಚ್‌ನ ಆವರಣದಲ್ಲಿ ಮಹಿಳೆಯರು ಮತ್ತು ಮಕ್ಕಳು ಇದ್ದರು. ಈ ಅಹಿತಕರ ಘಟನೆ ನಡೆದಿದ್ದು ಎಲ್ಲರಲ್ಲೂ ಅತಂಕ ಮೂಡಿಸಿತು. ದಿನೇ ದಿನೇ ಈ ರೀತಿಯ ಕಿರುಕುಳಗಳು ಹೆಚ್ಚುತ್ತಿದ್ದು, ನಮ್ಮ ಪ್ರಾರ್ಥಿಸುವ ಮತ್ತು ಧಾರ್ಮಿಕ ಹಕ್ಕಿನ ಉಲ್ಲಂಘನೆಯಾಗುತ್ತಿದೆ' ಎಂದು ಸ್ಥಳೀಯ ಪಾದ್ರಿಯೊಬ್ಬರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಸಂಬಂಧ ಇಲ್ಲಿಯವರೆಗೆ ಯಾವುದೇ ದೂರು ಸ್ವೀಕಾರವಾಗಿಲ್ಲ ಎಂದು ಪಟೌಡಿಯ ಠಾಣಾಧಿಕಾರಿ ಅಮಿತ್ ಕುಮಾರ್ ಹೇಳಿದ್ದಾರೆ. ಸ್ಥಳೀಯ ಆಡಳಿತ ಕೂಡ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.