ತಿರುವನಂತಪುರ: ಕೇರಳಕ್ಕೆ ಮೂರು ದಿನಗಳ ಭೇಟಿ ನೀಡಿ ರಾಷ್ಟ್ರಪತಿಗಳು ನಿನ್ನೆ ಬೆಳಿಗ್ಗೆ ಹಿಂತಿರುಗುತ್ತಿರುವಂತೆ ಈ ಮಧ್ಯೆ ಸಂಭವಿಸಿದ ಹಲವು ವಿಷಯಗಳು ಬಹಿರಂಗಗೊಳ್ಳುತ್ತಿದೆ. ಈ ಪೈಕಿ ತೀವ್ರ ಕಳವಳಕಾರಿಯಾದ ಘಟನೆಯೆಂದರೆ ರಾಷ್ಟ್ರಪತಿಗಳ ಬೆಂಗಾವಲು ಪಡೆ ಸಂಚರಿಸುತ್ತಿದ್ದಾಗ ಗಂಭೀರ ಭದ್ರತಾ ಲೋಪ ಉಂಟಾಗಿರುವುದು ಬಯಲುಗೊಂಡಿದೆ. ಯಾವುದೇ ಪೂರ್ವ ಸೂಚನೆಗಳಿಲ್ಲದೆ ತಿರುವನಂತಪುರದ ಮೇಯರ್ ಅವರ ವಾಹನ ಬೆಂಗಾವಲು ಪಡೆಯ ಎಡೆಯಲ್ಲಿ ಸೇರಿಕೊಂಡಿರುವುದು ಪತ್ತೆಯಾಗಿದೆ. ವಿಮಾನ ನಿಲ್ದಾಣದಿಂದ ಪೂಜಾಪುರಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ.
ವಿಮಾನ ನಿಲ್ದಾಣದಿಂದ ತೆರಳುವ ದಾರಿಯಲ್ಲಿ ತುಂಬಾ ಸೇಂಟ್ ಕ್ಸೇವಿಯರ್ಸ್ ಕಾಲೇಜು ಮತ್ತು ಜನರಲ್ ಆಸ್ಪತ್ರೆ ಮಧ್ಯೆ ಮೇಯರ್ ಅವರಿದ್ದ ವಾಹನ ರಾಷ್ಟ್ರಪತಿಗಳ ಬೆಂಗಾವಲು ವಾಹನ ವ್ಯೂಹದ ಮಧ್ಯೆ ಸೇರಿಕೊಂಡಿತು. ಮೇಯರ್ ಅವರಿದ್ದ ವಾಹನ ಬೆಂಗಾವಲು ಪಡೆಯ ಎಂಟನೇ ವಾಹನದ ಮಧ್ಯ ಪ್ರವೇಶಿಸಲು ಯತ್ನಿಸುತ್ತಿತ್ತು. ಕೂಡಲೇ ಹಿಂದಿನಿಂದ ಬಂದ ಪೈಲಟ್ ವಾಹನಗಳು ಬ್ರೇಕ್ ಹಾಕಿದವು. ಇದರೊಂದಿಗೆ ದೊಡ್ಡ ದುರಂತವೊಂದು ತಪ್ಪಿತು. ಸೇಂಟ್ ಕ್ಸೇವಿಯರ್ಸ್ ಕಾಲೇಜು ಮುಂಭಾಗದಲ್ಲಿ ರಾಷ್ಟ್ರಪತಿಗಳ ವಾಹನಕ್ಕೆ ಸಮಾನಾಂತರವಾಗಿ ಮೇಯರ್ ವಾಹನ ಸಾಗಿದೆ.
ಶಿಷ್ಟಾಚಾರದ ಪ್ರಕಾರ ರಾಷ್ಟ್ರಪತಿಗಳ ಬೆಂಗಾವಲು ಪಡೆಗಳು ಇತರೆ ವಾಹನಗಳಿಗೆ ಅವಕಾಶ ನೀಡುವಂತಿಲ್ಲ. ಆದರೆ ಮೇಯರ್ ವಾಹನ ಟ್ರಾಫಿಕ್ ಮಧ್ಯೆ ರಾಷ್ಟ್ರಪತಿಗಳ ಬೆಂಗಾವಲು ವ್ಯೂಹದೊಳಗೆ ನುಗ್ಗಿದ್ದು ಹೇಗೆಂಬುದೇ ಅಚ್ಚರಿಗೆ ಕಾರಣವಾಗಿದೆ. ಇದು ಗಂಭೀರ ಭದ್ರತಾ ಲೋಪವಾಗಿದೆ. ರಾಷ್ಟ್ರಪತಿಗಳ ಬೆಂಗಾವಲು ಪಡೆಯಲ್ಲಿ 14 ವಾಹನಗಳಿವೆ. ಪೋಲೀಸರು ಮತ್ತು ಕೇಂದ್ರ ಗುಪ್ತಚರ ದಳ ತನಿಖೆ ಆರಂಭಿಸಿದ್ದಾರೆ.
ಆದರೆ, ಮೇಯರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿ ಪ್ರೊಟೋಕಾಲ್ ತಿಳಿದಿಲ್ಲ ಎಂದು ಹೇಳಿರುವರು. ರಾಷ್ಟ್ರಪತಿಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಲಾಗುತ್ತಿತ್ತೆಂದು ಮೇಯರ್ ಆರ್ಯ ರಾಜೇಂದ್ರನ್ ತಿಳಿಸಿದ್ದಾರೆ.