ಶೀಘ್ರವೇ ನಾಗಾಲ್ಯಾಂಡ್‌ನಲ್ಲಿ ಸೇನೆಗೆ ನೀಡಿರುವ ವಿಶೇಷ ಅಧಿಕಾರವನ್ನು ಭಾಗಶಃ ಹಿಂಪಡೆಯಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ನಾಗಾಲ್ಯಾಂಡ್ ಹಾಗೂ ಇತರ ಈಶಾನ್ಯ ರಾಜ್ಯಗಳಲ್ಲಿ ಸೇನೆಗೆ ನೀಡಲಾಗಿರುವ ವಿಶೇಷ ಅಧಿಕಾರವನ್ನು ಭಾಗಶಃ ಹಿಂಪಡೆಯುವುದಕ್ಕೆ ಇರುವ ಸಾಧ್ಯತೆ, ಮಾರ್ಗಗಳನ್ನು ಕೇಂದ್ರ ಸರ್ಕಾರ ಅನ್ವೇಷಿಸಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.ಸಭೆಯ ಬಗ್ಗೆ ಮಾಹಿತಿಯುಳ್ಳ ಮೂಲಗಳು ನಾಗಾಲ್ಯಾಂಡ್ ಸಿಎಂ ನಿಫಿಯು ರಿಯೊ, ಡಿಸಿಎಂ ವೈ. ಪ್ಯಾಟನ್, ಮಾಜಿ ಸಿಎಂ ಟಿ ಆರ್ ಜೆಲಿಯಾಂಗ್ ಅವರು ಎಎಫ್ ಎಸ್ ಪಿಎ ಹಿಂಪಡೆಯುವುದರ ಬಗ್ಗೆ ಒಕ್ಕೊರಲ ಆಗ್ರಹ ಹೊಂದಿದ್ದರು. ಆದರೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ತಮ್ಮ ರಾಜ್ಯದ ಪರವಾಗಿ ಬೇರೆಯದ್ದೇ ನಿಲುವು ಹೊಂದಿದ್ದರು ಎಂದು ತಿಳಿದುಬಂದಿದೆ.
ಎಎಫ್ಎಸ್ ಪಿಎ ಹಿಂಪಡೆಯುವ ಸಂಬಂಧ ರಿಯೋ ಹಾಗೂ ಇನ್ನಿತರರಿಗೆ ಗೃಹ ಸಚಿವರು ಸ್ಪಷ್ಟ ಸಂದೇಶ ರವಾನಿಸಿದ್ದು, ಒಂದು ವೇಳೆ ಎಎಫ್ಎಸ್ ಪಿಎ ಹಿಂಪಡೆಯಬೇಕಾದಲ್ಲಿ ಅದಕ್ಕೆ ಸಂಬಂಧಿಸಿದ ವಿಧಾನಗಳೆಡೆಗೆ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ ಹಾಗೂ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಣೆಯ ವಿಷಯದಲ್ಲಿ ರಾಜ್ಯದ ಪೊಲೀಸರೇ ಹೆಚ್ಚಿನ ಹೊಣೆ, ಜವಾಬ್ದಾರಿ ಹೊರಬೇಕಾಗುತ್ತದೆ ಎಂಬ ಅಂಶಗಳನ್ನೂ ಮನದಟ್ಟು ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಾಗಾಲ್ಯಾಂಡ್, ಅಸ್ಸಾಂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಗುರುವಾರ ತಡರಾತ್ರಿ ಸಭೆ ನಡೆದಿದ್ದು ಈ ಬಳಿಕ ಇಂಥದ್ದೊಂದು ಸಾಧ್ಯತೆಯ ಬಗ್ಗೆ ಸುಳುವು ದೊರೆತಿದೆ. ಎಎಫ್ಎಸ್ ಪಿಎಗೆ ಅನುವು ಮಾಡಿಕೊಡುವ ತೊಂದರೆಗೊಳಗಾದ ಪ್ರದೇಶಗಳ ಅಧಿಸೂಚನೆ ಡಿ.31ರಂದು ನಾಗಾಲ್ಯಾಂಡ್ ನಲ್ಲಿ ಅಂತ್ಯಗೊಳ್ಳಲಿದ್ದು ಇದಕ್ಕೂ ಮುನ್ನ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕಿದೆ. ಒಂದು ವೇಳೆ ಎಎಫ್ಎಸ್ ಪಿಎಯನ್ನು ಹಿಂಪಡೆದರೂ ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಸೇನೆಯ ಪಾತ್ರವಿರುವ ರೀತಿಯಲ್ಲಿ ಯುನಿಫೈಡ್ ಕಮಾಂಡ್ ನ್ನು ರಚಿಸುವ ಸಾಧ್ಯತೆ ಇದೆ ಎಂದು ನಾಗಾಲ್ಯಾಂಡ್ ನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ನಾಗಾಲ್ಯಾಂಡ್ ನಲ್ಲಿ ಎಫ್ಎಸ್ ಪಿಎ ಭಾಗಶಃ ಹಿಂಪಡೆದರೂ ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿ ಆಗಿರಲಿದೆ. ಅಂತಿನ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿ ಸಭೆಯ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ. ಅಮಿತ್ ಶಾ ಸಂಸತ್‌ನಲ್ಲಿ ಹೇಳಿದ್ದೇನು?:ಸಂಸತ್ ಅಧಿವೇಶನದ ಉಭಯ ಸದನಗಳಲ್ಲಿ ನಾಗಾಲ್ಯಾಂಡ್‌ನ ನಾಗರಿಕರ ಹತ್ಯೆ ವಿಷಯ ಸದ್ದು-ಗದ್ದಲ ಸೃಷ್ಟಿಸಿತು. ಸೋಮವಾರ ಲೋಕಸಭೆ ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದರು. ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಅಮಿತ್ ಶಾ ತಮ್ಮ ಹೇಳಿಕೆಯನ್ನು ನೀಡುತ್ತಿದ್ದರೆ, ಸದಸ್ಯರು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದರು. ನಾಗಾಲ್ಯಾಂಡ್ ಗಡಿ ಪ್ರದೇಶದಲ್ಲಿ AFSPA ಅನ್ನು ರದ್ದುಗೊಳಿಸುವಂತೆ ಸದಸ್ಯರು ಆಗ್ರಹಿಸಿದರು. ಸಂಸತ್‌ನಲ್ಲಿ ಅಮಿತ್ ಶಾ ಹೇಳಿಕೆ ಮಯನ್ಮಾರ್ ಗಡಿಗೆ ಹೊಂದಿಕೊಂಡಿರುವ ನಾಗಾಲ್ಯಾಂಡ್ ಮೋನ್ ಜಿಲ್ಲೆಯ ಓಟಿಂಗ್ ಗ್ರಾಮದಲ್ಲಿ ಸೇನೆ ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಚಾತುರ್ಯ ನಡೆಯಿತು. ನಾಗರಿಕರನ್ನೇ ಉಗ್ರರು ಎಂದು ತಪ್ಪಾಗಿ ಭಾವಿಸಿದ ಯೋಧರು ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ 14 ನಾಗರಿಕರು ಮೃತಪಟ್ಟಿದ್ದರು. ನಾಗಾಲ್ಯಾಂಡ್‌ನಲ್ಲಿ ನಾಗರಿಕರ ಹತ್ಯೆಗೆ ಕೇಂದ್ರ ಸರ್ಕಾರ ವಿಷಾದ ವ್ಯಕ್ತಪಡಿಸುತ್ತದೆ. ಈ ಸಂಬಂಧ ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಮುಂದಿನ ಒಂದು ತಿಂಗಳಿನಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಸ್ಥಳದಲ್ಲಿ ಆತಂಕದ ವಾತಾವರಣವಿದೆ, ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲು ಎಲ್ಲಾ ಸೇನಾ ಪಡೆಗಳು ಭರವಸೆ ನೀಡಿವೆ", ಎಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.