ಪುಣೆ: ಕೊರೋನಾ ರೂಪಾಂತರಿ ಓಮಿಕ್ರಾನ್ ಸೋಂಕು ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಡಬ್ಲ್ಯುಹೆಚ್ಒ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಕರೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಸೇನಾ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಪ್ಯಾನೆಕ್ಸ್ -21 (PANEX-21) ಕಾರ್ಯಕ್ರಮದಲ್ಲಿ ವರ್ಚ್ಯುಯಲ್ ಆಗಿ ಭಾಗವಹಿಸಿ ಮಾತನಾಡಿರುವ ಸೌಮ್ಯ ಸ್ವಾಮಿನಾಥನ್, ದುರ್ಬಲರಾಗಿರುವ ಮಂದಿಯನ್ನು ಎರಡು ಡೋಸ್ ಲಸಿಕೆಯ ನಂತರವೂ ಸಾವು ಹಾಗೂ ಆಸ್ಪತ್ರೆಯ ಅಗತ್ಯದಿಂದ ಸುರಕ್ಷಿತರಾಗಿರಿಸುವುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕಾಗಿ ಲಸಿಕೆ ಅಭಿಯಾನದ ವ್ಯಾಪ್ತಿಯನ್ನು ಹೆಚ್ಚಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜಾಗತಿಕಮಟ್ಟದಲ್ಲಿ ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಒಪ್ಪಂದ (ಪ್ಯಾಂಡಮಿಕ್ ಟ್ರೀಟಿ)ದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಡೆಲ್ಟಾದಲ್ಲಿ ಸಾಮಾನ್ಯ ಲಸಿಕೆಗಳು ಕೆಲವು ಹಂತದವರೆಗೆ ವೈರಾಣು ತಟಸ್ಥಗೊಳಿಸುವಿಕೆ ಚಟುವಟಿಕೆ ಕುಸಿತ ಕಂಡಿತ್ತು, ಈಗ ಓಮಿಕ್ರಾನ್ ನಲ್ಲಿ ಇದು ಮತ್ತಷ್ಟು ಕಡಿಮೆಯಾಗುತ್ತಿದೆ. ಅಂದರೆ ಓಮಿಕ್ರಾನ್ ರೂಪಾಂತರಿ ನಮ್ಮ ರೋಗನಿರೋಧಕ ಶಕ್ತಿಯನ್ನು ಮೀರಿ ಬಾಧಿಸುವ ಸಾಧ್ಯತೆ ಇದೆ. ಆದರೂ ಲಸಿಕೆಯೊಂದೇ ಈಗಲೂ ನಮಗೆ ತೀವ್ರವಾದ ರೋಗದಿಂದ ಬಳಲದೇ ಸುರಕ್ಷಿತವಾಗಿರಲು ಇರುವ ಆಷಾಕಿರಣ ಎಂದು ಸ್ವಾಮಿನಾಥನ್ ತಿಳಿಸಿದ್ದಾರೆ.
ನಾವು ಜಾಗತಿಕ ಮಟ್ಟದಲ್ಲಿ ಲಸಿಕೆ ಅಭಿಯಾನವನ್ನು ವಿಸ್ತರಿಸಿ ಅದನ್ನು ಬಲಪಡಿಸಬೇಕಿದೆ ಎಂದು ಡಬ್ಲ್ಯುಹೆಚ್ಒ ಮುಖ್ಯ ವಿಜ್ಞಾನಿಗಳು ತಿಳಿಸಿದ್ದಾರೆ.
ಈಗ ಅಭಿವೃದ್ಧಿಪಡಿಸಲಾಗುತ್ತಿರುವ ಹೆಚ್ಚು ಲಸಿಕೆಗಳನ್ನು ಪರೀಕ್ಷೆಗೊಳಪಡಿಸಲು ಐಕಮತ್ಯ ಲಸಿಕೆ ಪ್ರಯೋಗ ವೇದಿಕೆಯನ್ನು ಡಬ್ಲ್ಯುಹೆಚ್ಒ ಸ್ಥಾಪಿಸಿದೆ ಎಂದು ಡಾ.ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.