ಪಠ್ಯದಲ್ಲಿರುವ ಅಂಶಗಳು ವಿದ್ಯಾರ್ಥಿಗಳಿಗೆ ಜೀವನವನ್ನು ಎದುರಿಸುವ, ಜೀವನ ರೂಪಿಸಿಕೊಳ್ಳುವ ವಿಧಾನಗಳನ್ನು ಕಲಿಸಬೇಕು, ಸ್ಥೈರ್ಯ ನೀಡಬೇಕೆಂಬುದು ಶಿಕ್ಷಣದ ಮೂಲಭೂತ ಅಂಶಗಳಲ್ಲಿ ಒಂದು. ಇದು ಕೇರಳದ ವಿದ್ಯಾರ್ಥಿಯೋರ್ವನ ಜೀವನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಹಾಗೂ ಇದಕ್ಕೆ ಮೂಲ ಪ್ರೇರಣೆ ಪಠ್ಯದಲ್ಲಿದ್ದ ಇನ್ಫೋಸಿಸ್ ಫೌಂಡೇಷನ್ ನ ಅಧ್ಯಕ್ಷರಾದ ಸುಧಾಮೂರ್ತಿ ಅವರ ಉಪಾಖ್ಯಾಗಳು ಎಂಬುದು ವಿಶೇಷ.
ದ್ವಿತೀಯ ಪಿಯು ಆಂಗ್ಲ ವಿಷಯದ ಪಠ್ಯದಲ್ಲಿ ಇನ್ಫೋಸಿಸ್ ಅಧ್ಯಕ್ಷರಾದ ಸುಧಾಮೂರ್ತಿ ಅವರ ಉಪಾಖ್ಯಾನಗಳನ್ನೊಳಗೊಂಡ "ಹೊರೆಗಲ್ಲು" ಪಾಠವಿದೆ. ಸುಧಾಮೂರ್ತಿ ಅವರ ಅಜ್ಜ ರಸ್ತೆ ಬದಿಯಲ್ಲಿ ಹೊರೆಗಲ್ಲ (ಕಲ್ಲಿನ ಮೇಜು) ಮೇಲೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಪ್ರಯಾಣಿಕರ ಜೀವನಾನುಭವಕ್ಕೆ ಹೇಗೆ ಕಿವಿಯಾಗುತ್ತಿದ್ದರು ಎಂಬುದು ಪಠ್ಯ, ಕಥೆಯಲ್ಲಿರುವ ಪ್ರಮುಖ ಅಂಶ. ಇದನ್ನೇ ಉನ್ನತ ಮಾಧ್ಯಮಿಕ ಶಿಕ್ಷಕರೊಬ್ಬರು ಈ ಪಾಠದ ಉದ್ಧೃತ (ಆಯ್ದ ಭಾಗ) ವನ್ನು ಬೋಧಿಸುತ್ತಿದ್ದಾಗ ಆಕೆಗೆ ತನ್ನದೇ ವಿದ್ಯಾರ್ಥಿಯೋರ್ವನ ಜೀವನವನ್ನು ಈ ಪಾಠ ಬದಲಿಸುತ್ತದೆ ಎಂಬ ಕಲ್ಪನೆಯೂ ಇರಲಿಲ್ಲ.
ಈ ಉಪಾಖ್ಯಾನದಲ್ಲಿ ಸುಧಾಮೂರ್ತಿ ಅವರ ಸಹೋದ್ಯೋಗಿಯಾಗಿದ್ದ ರತ್ನ ಅವರು ತಮ್ಮ ಸಹೋದ್ಯೋಗಿಗಳ ಸಂಕಟಗಳಿಗೆ ಹೇಗೆ ಕಿವಿಯಾಗುತ್ತಿದ್ದರು ಅದನ್ನು ಹೇಗೆ ಗೌಪ್ಯವಾಗಿ ಕಾಪಾಡಿಕೊಳ್ಳುತ್ತಿದ್ದರು ಎಂಬುದನ್ನೂ ಉಲ್ಲೇಖಿಸಲಾಗಿದೆ.
ನಾನು ಸಹಾನುಭೂತಿಯಿಂದ, ಯಾವುದೇ ನಿರ್ಣಯವೂ ಇಲ್ಲದೇ ಅವರು ಹೇಳುತ್ತಿದ್ದದ್ದನ್ನು ಕೇಳುತ್ತಿದ್ದೆ. ಯಾವುದೇ ವ್ಯಕ್ತಿ ಸಂಕಷ್ಟದಲ್ಲಿದ್ದಾಗ, ಒತ್ತಡದಲ್ಲಿದ್ದಾಗ ತಮ್ಮ ನೋವನ್ನು ಹೊರಹಾಕುವುದಕ್ಕೆ ಬಯಸುತ್ತಾರೆ. ಈ ರೀತಿ ಮಾಡುವುದರಿಂದ ಅವರ ಹೊರೆ ಕಡಿಮೆಯಾಗುತ್ತದೆ" ಎಂದು ರತ್ನ ಅವರ ಮಾತುಗಳನ್ನು ಸುಧಾಮೂರ್ತಿ ಉಲ್ಲೇಖಿಸಿದ್ದರು.
ಈ ಪಠ್ಯವನ್ನು ಬೋಧಿಸಿದ ಮರುದಿನವೇ 17 ವರ್ಷದ ಓರ್ವ ವಿದ್ಯಾರ್ಥಿ ಶಿಕ್ಷಕಿಯನ್ನು ಭೇಟಿ ಮಾಡಲು ಸಿಬ್ಬಂದಿ ಕೊಠಡಿಗೆ ಬಂದು ಆಕೆಯೆದುರು ಜೋರಾಗಿ ಅಳತೊಡಗಿದೆ. ಗದ್ಗದಿತನಾಗಿದ್ದ ಆತ ಏನು ಹೇಳುತ್ತಿದ್ದಾನೆ ಎಂಬುದು ನನಗೆ ಮೊದಲು ಅರ್ಥವಾಗಲಿಲ್ಲ. ಆ ನಂತರ ನನಗೆ ಆತನ ಜೀವನದಲ್ಲಿ ನಡೆದ ಅಹಿತಕರ ಅನುಭವವನ್ನು ವಿವರಿಸುತ್ತಿದ್ದಾನೆ ಎಂಬುದು ಅರ್ಥವಾಯಿತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ ಶಿಕ್ಷಕಿ ಹೇಳಿದ್ದಾರೆ.
ಆ ಬಾಲಕನ ಮೇಲೆ ನೆರೆಮನೆಯ ವ್ಯಕ್ತಿ ಹಲವು ವರ್ಷಗಳಿಂದ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂಬುದು ನಿಧಾನವಾಗಿ ಬೆಳಕಿಗೆ ಬಂತು. ಈ ಘಟನೆಯಿಂದ ವಿದ್ಯಾರ್ಥಿಯ ಮಾನಸಿಕ ಆರೋಗ್ಯದ ಮೇಲೆಯೂ ದುಷ್ಪರಿಣಾಮ ಉಂಟಾಗಿತ್ತು, ಯಾರೊಂದಿಗೂ ಈ ಘಟನೆಯನ್ನು ಬಹಿರಂಗಪಡಿಸದೇ ಆತ ಮೌನವಾಗಿ ನೋವು ಎದುರಿಸುತ್ತಿದ್ದ. ಆದರೆ ಆತನ ಆಂಗ್ಲ ಶಿಕ್ಷಕಿ ಮಾಡಿದ ಪಾಠದಿಂದ ಧೈರ್ಯ ತಂದುಕೊಂಡ ಬಾಲಕ ತನಗಾಗುತ್ತಿದ್ದ ವೇದನೆಯನ್ನು ಶಿಕ್ಷಕಿಯ ಬಳಿ ಹೇಳಿಕೊಂಡಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆಯೇ ಶಾಲೆಯ ಅಧಿಕಾರಿಗಳು ಸಂಸ್ಥೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಿಯೋಜಿಸಲಾಗಿದ್ದ ಮಾನಸಿಕ ಸಲಹೆಗಾರರನ್ನು ಕರೆಸಿ, ಸರಣಿ ಸಮಾಲೋಚನೆ ಸೆಷನ್ ಗಳನ್ನು ನಡೆಸಿದ ಬಳಿಕ ತನಾದ ನೋವಿನ ಬಗ್ಗೆ ಪೂರ್ಣ ವಿವರಗಳನ್ನು ನೀಡಿ ಕೃತ್ಯ ಎಸಗಿದವರ ಬಗ್ಗೆ ಮಾಹಿತಿಯನ್ನೂ ನೀಡಿದ್ದಾನೆ.
ಬಾಲಕನ ಮನಸ್ಥಿತಿ ಕದಡಿದ್ದರ ಪರಿಣಾಮ ಆತನಿಗೆ ಮನೋವೈದ್ಯಕೀಯ ಚಿಕಿತ್ಸೆಯನ್ನೂ ನೀಡಲಾಗಿದೆ. ಬಾಲಕನ ಪೋಷಕರಿಗೆ ಈ ಮಾಹಿತಿ ತಲುಪಿಸಿದಾಗ ಆರಂಭದಲ್ಲಿ ಇದನ್ನು ಅವರು ಮುಚ್ಚಿ ಹಾಕಲು ಯತ್ನಿಸಿದರು. ಆದರೆ ನಂತರ ಇದರ ಗಂಭೀರತೆಯನ್ನು ತಿಳಿಸಿದ ಬಳಿಕ ಪೊಲೀಸರನ್ನು ಸಂಪರ್ಕಿಸಿ ಕುಕೃತ್ಯ ಎಸಗಿದವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ
ಮಕ್ಕಳ ಮನೋವೈದ್ಯ ಡಾ. ಜಯಪ್ರಕಾಶ್ ಆರ್ ಈ ಬಗ್ಗೆ ಮಾತನಾಡಿದ್ದು, ಮಕ್ಕಳಲ್ಲಿ ಅಗತ್ಯವಿದ್ದಾಗ ಸಹಾಯವನ್ನು ಪಡೆಯುವ ಗುಣವನ್ನು ಬೆಳೆಸಬೇಕು ಅವರು ನಂಬುವ ವ್ಯಕ್ತಿಗಳ ಜೊತೆಗೆ ಹೇಳಿಕೊಳ್ಳುವುದನ್ನು ಉತ್ತೇಜಿಸಬೇಕು ಎನ್ನುತಾರೆ.