HEALTH TIPS

'ರಾಷ್ಟ್ರೀಯ ಭಾಷಾನೀತಿ ರೂಪಿಸದಿದ್ದರೆ ಮಾತೃ ಭಾಷೆಗಳಿಗೆ ಆಪತ್ತು': ಪರುಷೋತ್ತಮ ಬಿಳಿಮಲೆ

             ಬೆಂಗಳೂರು: "ರಾಷ್ಟ್ರೀಯ ಭಾಷಾನೀತಿ ರೂಪಿಸದಿದ್ದರೆ ನಾನಾ ಮಾತೃ ಭಾಷೆಗಳಿಗೆ ದೊಡ್ಡ ಆಪತ್ತು ಎದುರಾಗಲಿದೆ," ಎಂದು ದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಹಾಗೂ ಚಿಂತಕ ಪುರುಷೋತ್ತಮ ಬಿಳಿಮಲೆ ಹೇಳಿದರು.

               ಪ್ರಜಾ ಪ್ರಕಾಶನ -ಬೆಂಗಳೂರು ವತಿಯಿಂದ ಇಂಡಿಯನ್ ಎಕ್ಸ್‌ಪ್ರೆಸ್ ಕಟ್ಟಡದ ಪರ್ಲ್ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರು ಸಂಸತ್ತಿನಲ್ಲಿ ಮಾಡಿದ ಭಾಷಣಗಳ ಆಯ್ದು ಭಾಗ-1 "ತುಳು-ಕೊಡವ ಭಾಷೆಗಳ ಅಳಿವು-ಉಳಿವು" ಕೃತಿ ಲೋಕಾರ್ಪಣೆ ಮಾಡಿ ಭಾನುವಾರ ಮಾತನಾಡಿದರು.

              "ಒಂದು ಭಾಷೆ ಸತ್ತರೆ ಆ ಭಾಷೆಯ ಹಿಂದಿರುವ ಶ್ರೀಮಂತ ಸಂಸ್ಕೃತಿ ಕೂಡ ಹಾಳಾಗುತ್ತದೆ. ಕೇವಲ ಕೊಡವ ಭಾಷೆಯ ಕಥೆಯಷ್ಟೇ ಅಲ್ಲ. 1971ರಿಂದ 2011ರ ವರೆಗಿನ ಅಂಕಿ ಅಂಶಗಳನ್ನು ತೆಗೆದು ಕೊಂಡಾಗ ದೇಶದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಶೇ.56ರಷ್ಟು ಏರಿಕೆ ಆಗಿದೆ. ತೆಲಗು, ತಮಿಳು ಶೇ.9ರಷ್ಟು ಬೆಳವಣಿಗೆ ಆಗಿದೆ.ಆದರೆ ಕನ್ನಡ ಭಾಷೆ ಬೆಳವಣಿಗೆ ಇಡೀ ದೇಶದಲ್ಲಿರುವ ಭಾಷೆಗಳಿಗಿಂತ ಕಡಿಮೆ ಅಂದರೆ 3.75 ರಷ್ಟು ಮಾತ್ರ. ಈ ಅಂಕಿ ಅಂಶ ಅತ್ಯಂತ ಆಘಾತಕಾರಿಯಾದುದು. ಭಾರತ ಬಹುತ್ವದ ದೇಶ ಇಲ್ಲಿ ಹಲವು ಭಾಷೆ, ಸಂಸ್ಕೃತಿಗಳ ಸಮ್ಮಿಲನವಿದೆ. ಸುಮಾರು 19,569 ಭಾಷೆಗಳು ಭಾರತದಲ್ಲಿದ್ದು ಆ ಎಲ್ಲಾ ಭಾಷೆಗಳನ್ನು ನಾವೆಲ್ಲರೂ ಜೋಪಾನವಾಗಿ ಕಾಪಾಡಿಕೊಳ್ಳಬೇಕಾಗಿದೆ. ಆ ಹಿನ್ನೆಲೆಯಲ್ಲಿ ನಮ್ಮ, ನಮ್ಮ ತಾಯಿಭಾಷೆಯನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ಭಾಷಾ ನೀತಿ ಅಗತ್ಯವಾಗಿದೆ," ಎಂದರು.

                  ಸಂವಿಧಾನ ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ, ಆರೆಸ್ಸೆಸ್‍ನದ್ದು ಅಲ್ಲ

               ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮಾತನಾಡಿ, "ಸಂವಿಧಾನದ ಮೇಲೆ ಆಗುತ್ತಿರುವ ಆಕ್ರಮಣವನ್ನು ತಡೆಯದಿದ್ದರೆ ಮುಂದೆ ಅಪಾಯ ಕಾದಿದೆ. ಸಂವಿಧಾನದಲ್ಲಿ ಎಲ್ಲಾ ರೀತಿಯ ಆಶಯಗಳಿವೆ. ಬಹುಸಂಸ್ಕೃತಿ, ಬಹುತ್ವದ ರಾಷ್ಟ್ರದಲ್ಲಿ ಎಲ್ಲರಿಗೂ ಸಹ ಸಮಾಜ ಅವಕಾಶಗಳು, ಸಮಾನ ಹಕ್ಕು ಇದೆ ಎಂಬುದನ್ನು ಸಂವಿಧಾನದ ಮೂಲಕ ನಮ್ಮ ಹಿರಿಯರು ನೀಡಿದ್ದಾರೆ. 2014ರ ನಂತರ ಆಕ್ರಮಣ ನಡೆಯುತ್ತಿದೆ. ಇದನ್ನು ಕಾಪಾಡಬೇಕಾದ್ದು ನಮ್ಮ, ನಿಮ್ಮೆಲ್ಲರ ಮೇಲಿದೆ. ಸಂವಿಧಾನ ಕಳಚಿಕೊಂಡು ಹೋಯಿತು ಎಂದರೆ ಎಲ್ಲವೂ ಹೋದಂತೆ. ಪಟೇಲರು ಇರುತ್ತಾರೆ, ಜಮೀನ್ದಾರರು ಇರುತ್ತಾರೆ. ಶಾನುಭೋಗರು ಇರುತ್ತಾರೆ. ನಾವೆಲ್ಲಾ ಕೂಲಿಕಾರರಾಗಿರುತ್ತೇವೆ," ಎಂದ ಅವರು, "ಸಂವಿಧಾನ ನೀಡಿರುವುದು ಕಾಂಗ್ರೆಸ್ಸಿಗರು. ಹೀಗಾಗಿ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಾದ್ದು ನಮ್ಮ ಜವಾಬ್ದಾರಿ. ಇದು ಆರೆಸ್ಸೆಸ್‍ನವರ ಜವಾಬ್ದಾರಿಯಲ್ಲ. ಸಂವಿಧಾನವನ್ನು ಕಾಪಾಡದಿದ್ದರೆ ಮುಂದೆ ಅಪಾಯ ಕಾದಿದೆ" ಎಂದು ಎಚ್ಚರಿಕೆ ನೀಡಿದರು.

                        "ಕೊಡವ ಮತ್ತು ತುಳುವಿನಲ್ಲಿ ಸಂವಿಧಾನದ ಆಶಯವಿದೆ"

                 "ಕೊಡವ ಮತ್ತು ತುಳುವಿನಲ್ಲಿ ಸಂವಿಧಾನದ ಆಶಯವಿದೆ. ಹೀಗಾಗಿ ಕೊಡವ ಮತ್ತು ತುಳುವನ್ನು ಕಾಪಾಡಬೇಕು. 1956ರ ರಾಜ್ಯ ಪುನರ್ ರಚನೆಯಾದಾಗ ಸಂವಿಧಾನದ 7ನೇ ತಿದ್ದುಪಡಿಯಾದಾಗ, ಎಲ್ಲಾ ಭಾಷೆಗಳ ರಕ್ಷಣೆಯ ಖಾತ್ರಿ ನೀಡಿದೆ. ಅನುಚ್ಛೇದ 347, 350ಎ, 350ಬಿ ಪ್ರಕಾರ ದೊಡ್ಡ ರಾಜ್ಯಗಳೊಂದಿಗೆ ವಿಲೀನಗೊಳ್ಳುವ ಪ್ರದೇಶಗಳೊಂದಿಗೆ ಸ್ಥಳೀಯ ಭಾಷೆಗಳನ್ನು ಉಳಿಸಿ, ಬೆಳೆಸುವುದು ನೂತನ ರಾಜ್ಯಗಳ ಜವಾಬ್ದಾರಿ ಎಂಬುದನ್ನು ಸಾರಿ ಹೇಳಿದೆ ಎಂದ ಅವರು, ದೇಶದಲ್ಲಿ 22 ಅಧಿಕೃತ ಭಾಷೆಗಳಿವೆ. ಇದರಲ್ಲಿ ಕನ್ನಡ ಕೂಡ ಒಂದು ಅಧಿಕೃತ ಭಾಷೆ. ಆದರೆ ನಮ್ಮಲ್ಲಿ 28 ಸಾವಿರ ಮಂದಿ ಮಾತನಾಡುವ ಸಂಸ್ಕೃತಕ್ಕೆ 640 ಕೋಟಿ ರೂ. ಕೊಡುತ್ತಾರೆ. 6 ಕೋಟಿ ಕನ್ನಡ ಮಾತನಾಡುವವರಿಗೆ 3 ಕೋಟಿ ಕೊಡ್ತೀರಿ. ತುಳು, ಕೊಡವಗೆ ಶೂನ್ಯ. ಅಧಿಕೃತ ಭಾಷೆಯನ್ನು ಪ್ರಚಾರ ಮಾಡುವುದು, ಬೆಳವಣಿಗೆ ಮಾಡಬೇಕು ಎಂದು ಸಂವಿಧಾನದಲ್ಲೇ ಹೇಳಲಾಗಿದೆ. ಹೀಗಿದ್ದರೂ ಯಾಕೆ ಅದನ್ನು ಪಾಲಿಸುತ್ತಿಲ್ಲ," ಎಂದು ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದರು.

                       "ಹಿಂದಿ ಹೇರಿಕೆ ಸಹಿಸಲಾಗದು"

               ರಾಜ್ಯಸಭಾ ಸಂಸದ ಮತ್ತು ಸಾಹಿತಿ ಎಲ್.ಹನುಮಂತಯ್ಯ ಮಾತನಾಡಿ, "ಕನ್ನಡ ಸೇರಿದಂತೆ ಭಾರತದ ಇತರ ಭಾಷೆಯ ರೀತಿಯಲ್ಲೆ ಹಿಂದಿ ಒಂದು ಭಾಷೆಯಾಗಿದೆ. ಅದನ್ನು ಒಂದು ಭಾಷೆ ಕಲಿಯಲಿ ನಮ್ಮ ಅಭ್ಯಂತರವಿಲ್ಲ. ಆದರೆ ಒತ್ತಾಯ ಪೂರ್ವಕವಾಗಿ ಹಿಂದಿ ಹೇರಿಕೆ ಮಾಡಿದರೆ ಅದನ್ನು ಸಹಿಸಲಾಗುವುದು ಎಂದರು. ಎಲ್ಲಾ ಭಾಷೆಗಳಿಗೆ ಗೌರವ ಕೊಡುವ ಸಂಬಂಧ ಒಂದು ರಾಷ್ಟ್ರೀಯ ಕಾನೂನು ತರುವ ಅಗತ್ಯವಿದೆ ಎಂದು ಹೇಳಿದರು.

                               99 ಭಾಷೆಗಳು 8ನೇ ಪರಿಚ್ಛೇದಕ್ಕಾಗಿ ಕಾಯುತ್ತಿವೆ

            "ಈ ಹಿಂದೆ 2003ರಲ್ಲಿ ತುಳು, ಕಾಶ್ಮೀರದ ಡೋಗ್ರಾ, ಬಿಹಾರ ಮೈಥಿಲಿ, ಸಂತಾಲಿ, ಬೋಡೋ ಭಾಷೆಗಳನ್ನು ಸಂವಿಧಾನ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಪಟ್ಟಿಯಲ್ಲಿದ್ದವು. ಆದರೆ ತುಳು ಭಾಷೆಯನ್ನು ಬಿಟ್ಟು ಉಳಿದೆಲ್ಲ ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲಾಯಿತು. 2008ರಲ್ಲಿ ಈ ಸಂಖ್ಯೆ 3ಕ್ಕೆ ಏರಿತು. ಈಗ ತುಳು ಸೇರಿದಂತೆ ಸುಮಾರು 99 ಭಾಷೆಗಳು 8ನೇ ಪರಿಚ್ಛೇದಕ್ಕೆ ಸೇರಲು ತುದಿಗಾಲಿನಲ್ಲಿವೆ," ಎಂದು ಪುರುಷೋತ್ತಮ ಬಿಳಿಮಲೆ ತಿಳಿಸಿದರು. ಕಾರ್ಯಕ್ರಮದಲ್ಲಿ ಲೇಖಕಿ ಬಿ.ಟಿ.ಲಲಿತಾನಾಯಕ್, ಕೃತಿ ಸಂಪಾದಕ ಆರ್‌. ಜಯಕುಮಾರ್, ಕಾಂಗ್ರೆಸ್ ಮುಖಂಡ ಯು.ಬಿ. ವೆಂಕಟೇಶ್, ಎನ್.ವಿ.ನಾಚಪ್ಪ ಮತ್ತಿತರರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries