ಹಿಸಾರ್: ಹರಿಯಾಣದ ಹಿಸಾರ್ ಜಿಲ್ಲೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸೋಮವಾರ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಹಿಸಾರ್ ಜಿಲ್ಲೆಯ ಆಗ್ರೋಹ ಪೊಲೀಸ್ ಠಾಣೆ ವ್ಯಾಪ್ತಿಯ ನಂಗ್ತಾಲಾ ಗ್ರಾಮದ ಕುಟುಂಬಸ್ಥರು ಶವವಾಗಿ ಪತ್ತೆಯಾಗಿದ್ಧಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಕುಟುಂಬದ ಮುಖ್ಯಸ್ಥ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕೊಲೆ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಮೇಶ್ ಕುಮಾರ್ (43) ಅವರ ಮೃತದೇಹ ಮನೆಯ ಹೊರಗೆ ರಸ್ತೆಯಲ್ಲಿ ಬಿದ್ದಿದ್ದು, ಅವರ ಪತ್ನಿ ಸವಿತಾ (35), ಇಬ್ಬರು ಪುತ್ರಿಯರಾದ ಅನುಷ್ಕಾ (14) ಮತ್ತು ದೀಪಿಕಾ (12) ಹಾಗೂ ಮಗ ಕೇಶವ್ (10) ಅವರ ಶವಗಳು ಮನೆಯೊಳಗೆ ಪತ್ತೆಯಾಗಿವೆ.
ಸೋಮವಾರ ಬೆಳಗ್ಗೆ ರಮೇಶನ ಶವವನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಗ್ರೋಹ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದಾರೆ.
ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.