ಕಾಸರಗೋಡು: ಧರ್ಮದ ಹೆಸರಿನಲ್ಲಿ ಶಿಕ್ಷಕರು ಲಸಿಕೆ ಹಾಕದಿರುವುದನ್ನು ಒಪ್ಪುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಹೇಳಿರುವರು. ಎಲ್ಲ ಶಿಕ್ಷಕರಿಗೂ ಲಸಿಕೆ ಹಾಕಬೇಕು ಎಂಬುದು ನನ್ನ ನಿಲುವು ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ಕಾಸರಗೋಡಲ್ಲಿ ಮಾಧ್ಯಮಗಳಿಗೆ ತಿಳಿಸಿದರು.
"ಮಕ್ಕಳ ಸುರಕ್ಷತೆಯು ಅತಿಮುಖ್ಯವಾಗಿದೆ. ಧಾರ್ಮಿಕ ಅಥವಾ ಇತರ ಕಾರಣಗಳಿಗಾಗಿ ವ್ಯಾಕ್ಸಿನೇಷನ್ ನಿಂದ ದೂರವಿರುವುದು ಸ್ವೀಕಾರಾರ್ಹವಲ್ಲ " ಎಂದು ವಿಡಿ ಸತೀಶನ್ ಹೇಳಿದರು.
ಲಸಿಕೆ ಹಾಕದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕ ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಹೇಳಿದ ಬೆನ್ನಲ್ಲೇ ವಿರೋಧ ಪಕ್ಷದ ನಾಯಕರೂ ಈ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ. ಲಸಿಕೆ ಹಾಕದ ಶಿಕ್ಷಕರ ಪಟ್ಟಿಯನ್ನು ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಕೇಳಿರುವುದಾಗಿ ಸಚಿವರು ಮೊನ್ನೆಯೇ ಹೇಳಿದ್ದರು.
ರಾಜ್ಯದಲ್ಲಿ ಸುಮಾರು 5,000 ಶಿಕ್ಷಕರಿಗೆ ಇನ್ನೂ ಲಸಿಕೆ ಹಾಕಬೇಕಿದೆ ಎಂದು ವರದಿಯಾಗಿದೆ. ಶಿಕ್ಷಕರು ಮತ್ತು ಬೋಧಕೇತರರಿಗೆ ಲಸಿಕೆ ಹಾಕಬೇಕು. ಲಸಿಕೆ ಹಾಕಿಸಿಕೊಳ್ಳದವರು ಕ್ಯಾಂಪಸ್‍ಗೆ ಪ್ರವೇಶಿಸಬಾರದು ಎಂಬುದು ಮಾರ್ಗಸೂಚಿಯಾಗಿದೆ. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಸಚಿವ ವಿ.ಶಿವಂÀಕುಟ್ಟಿ ಹೇಳಿಕೆ ನೀಡಿದ್ದರು. ಲಸಿಕೆಗೆ ಸಂಬಂಧಿಸಿದಂತೆ ಆರೋಗ್ಯ ಸಮಸ್ಯೆ ಇರುವವರು ಆರೋಗ್ಯ ಸಮಿತಿಯಿಂದ ವರದಿ ಪಡೆಯಬೇಕು ಎಂದು ಸರ್ಕಾರ ಸೂಚಿಸಿದೆ.
ಸುಮಾರು 5,000 ಶಿಕ್ಷಕರು ಲಸಿಕೆ ಹಾಕಲು ಉಳಿದಿದ್ದಾರೆ ಎಂಬ ವರದಿಗಳು ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಚರ್ಚೆಯಾಗಿತ್ತು. ಇದಾದ ಬಳಿಕ ಲಸಿಕೆ ಹಾಕದ ಶಿಕ್ಷಕರಿಗೆ ಯಾವುದೇ ರೀತಿಯ ಬೆಂಬಲ ನೀಡುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಕೇವಲ 5,000 ಜನರು ಮಾತ್ರ ಈ ನಿರ್ಧಾರವನ್ನು ಉಲ್ಲಂಘಿಸುವಂತಿಲ್ಲ. ಲಸಿಕೆ ಹಾಕಿಸಿಕೊಳ್ಳದವರು ಸಮಾಜದಲ್ಲಿ ಅನಾಹುತ ಉಂಟು ಮಾಡಬಾರದು ಎಂದು ಸಚಿವರು ಹೇಳಿರುವರು.