ಮಂಜೇಶ್ವರ: ಲೇಖಕಿ ಪ್ರಮೀಳಾ ಚುಳ್ಳಿಕ್ಕಾನ ಅವರ " ಭಾವಶರಧಿ " ಕವನಸಂಕಲನದ ಬಿಡುಗಡೆ ಸಮಾರಂಭ ಇತ್ತೀಚೆಗೆ ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣ " ನಾರಾಯಣೀಯಂ ನಲ್ಲಿ ನಡೆಯಿತು. ಚುಳ್ಳಿಕ್ಕಾನ ಶ್ರೀಕೃಷ್ಣ ಭಟ್ ಅವರ " ನಿಸರ್ಗ " ಪ್ರಕಾಶನದ ಮೂಲಕ ಪ್ರಕಟವಾದ ' ಭಾವಶರಧಿ ' ವೈವಿಧ್ಯಮಯ 102 ಕವನಗಳನ್ನು ಒಳಗೊಂಡಿದೆ.
ಖ್ಯಾತ ಸಾಹಿತಿ ಗಳು, ಕೃಷಿ ಸಂಶೋಧಕರೂ ಆದ ಬದನಾಜೆ ಶಂಕರ ಭಟ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಸಹಜ ಭಾವ ಸ್ಪಂದನೆಯಿಂದ ಮನದಲ್ಲಿ ಮೂಡಿದ ಭಾವಗಳೇ ಅಕ್ಷರರೂಪವಾಗಿ ' ಭಾವಶರಧಿ ' ಯಲ್ಲಿ ಒಂದಾಗಿ ಬಿಟ್ಟಿವೆ " ಎಂದು ಕವನಸಂಕಲನವನ್ನು ಬಿಡುಗಡೆಗೊಳಿಸಿದ ಕಾಸರಗೋಡಿನ ಹಿರಿಯ ಲೇಖಕ ಡಾ. ರಮಾನಂದ ಬನಾರಿ ನುಡಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಿಕೆ ಡಾ. ಯು. ಮಹೇಶ್ವರಿ, ನಿವೃತ್ತ ಕನ್ನಡ ಅಧ್ಯಾಪಕ ಹಾಗೂ ಖ್ಯಾತ ಸಾಹಿತಿ, ಶಿಕ್ಷಣ ತಜ್ಞ ವಿ.ಬಿ. ಕುಳಮರ್ವ ಅವರು ಲೇಖಕಿಗೆ ಶುಭಹಾರೈಸಿದರು. ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ಸಂಚಾಲಕಿ ಪ್ರೇಮಾ ಕೆ.ಭಟ್ ತೊಟ್ಟೆತ್ತೋಡಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಲೇಖಕಿ ಪ್ರಮೀಳಾ ಅವರ ಇನ್ನಷ್ಟು ಕೃತಿಗಳು ಮೂಡಿಬಂದು ಜನಮಾನಸ ತಲುಪುವಂತಾಗಲಿ ಎಂದು ಹರಸಿದರು.
" ಭಾವಶರಧಿ " ಕೃತಿಯ ಅವಲೋಕನ ನಡೆಸಿದ ಅಧ್ಯಾಪP ರಾಜಾರಾಮ ರಾವ್.ಟಿ ಅವರು ಕವನಸಂಕಲನದ ಸಾರವನ್ನು ತೆರೆದಿಟ್ಟರು. ಲೇಖಕಿ ಪ್ರಮೀಳಾ ಚುಳ್ಳಿಕ್ಕಾನ ಅವರು ಮನದಾಳದ ಮಾತುಗಳ ಮೂಲಕ ತಮ್ಮ ಸಾಹಿತ್ಯ ರಚನೆಗೆ ಹಾಗೂ ಕೃತಿ ಬಿಡುಗಡೆಗೆ ಪ್ರೋತ್ಸಾಹ ನೀಡಿದವರನ್ನು ಸ್ಮರಿಸಿ ಕೃತಜ್ಞತೆ ಅರ್ಪಿಸಿದರು.
ಪ್ರಸನ್ನಾ ಸಿ.ಯಸ್.ಭಟ್, ರೇಷ್ಮಾ ಕಜೆ ಹಾಗೂ ಇತರ ಗಾಯಕರ ' ಭಾವಶರಧಿ ' ಯ ಭಾವಯಾನ ನಡೆಯಿತು. ಬಳಿಕ ಆಹ್ವಾನಿತ ಕವಿಗಳಿಂದ ಕವಿಗೋಷ್ಠಿ ನಡೆಯಿತು. ಕುಮಾರಿ ಪೃಥ್ವಿ ಚುಳ್ಳಿಕ್ಕಾನ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ಸ್ವಾಗತಿಸಿ, ಮಂಗಳೂರು ಕೆನರಾ ಪ್ರೌಢಶಾಲಾ ಅಧ್ಯಾಪಿಕೆ ಲಕ್ಷ್ಮೀ ವಿ. ಭಟ್ ವಂದಿಸಿದರು. ನವಜೀವನ ಹೈಯರ್ ಸೆಕೆಂಡರಿ ಶಾಲಾ ಅಧ್ಯಾಪಿಕೆ ಸುಶೀಲಾ ಪದ್ಯಾಣ ನಿರೂಪಿಸಿದರು.