ಕೊಚ್ಚಿ; ವಿವಾಹದ ಸಂದರ್ಭ ಯಾವುದೇ ಕೋರಿಕೆ ಇಲ್ಲದೆ ಪೋಷಕರು ನೀಡುವ ಉಡುಗೊರೆಗಳನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ. ವಧುವಿಗೆ ನೀಡುವ ಆಭರಣ ಸೇರಿದಂತೆ ಉಡುಗೊರೆಗಳು ವರದಕ್ಷಿಣೆಗೆ ಒಳಪಡುವುದಿಲ್ಲ. ಮದುವೆ ಸಂದರ್ಭದಲ್ಲಿ ಯುವತಿ ಪಡೆದಿರುವ ಚಿನ್ನಾಭರಣಗಳನ್ನು ಹಿಂದಿರುಗಿಸಬೇಕೆಂಬ ಆದೇಶದ ವಿರುದ್ಧ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿ ಈ ತೀರ್ಪು ನೀಡಿದೆ.
ಕೊಲ್ಲಂ ಜಿಲ್ಲಾ ವರದಕ್ಷಿಣೆ ನಿಷೇಧ ಅಧಿಕಾರಿ ಮಹಿಳೆಯ ಚಿನ್ನಾಭರಣಗಳನ್ನು ಹಿಂದಿರುಗಿಸುವಂತೆ ಆದೇಶಿಸಿದ್ದಾರೆ. ವಿವಾಹಕ್ಕೆಂದು ವಧು ಪಡೆದಿದ್ದ 55 ಪವನ್ ಚಿನ್ನವನ್ನು ಇಬ್ಬರ ಹೆಸರಿನಲ್ಲಿಯೂ ಲಾಕರ್‍ನಲ್ಲಿ ಇರಿಸಲಾಗಿತ್ತು. ಯುವತಿ ಅದನ್ನು ಮರಳಿ ಬಯಸಿದ್ದಳು.
ನಂತರ ಜಿಲ್ಲಾ ವರದಕ್ಷಿಣೆ ನಿಷೇಧಾಧಿಕಾರಿ ಅದನ್ನು ಹಿಂತಿರುಗಿಸುವಂತೆ ಆದೇಶಿಸಿದರು. ಆದರೆ, ಈ ಚಿನ್ನಾಭರಣ ವರದಕ್ಷಿಣೆ ಅಲ್ಲ, ಹೀಗಾಗಿ ಅದನ್ನು ವಾಪಸ್ ನೀಡುವಂತೆ ಆದೇಶ ನೀಡುವ ಅಧಿಕಾರ ಅಧಿಕಾರಿಗೆ ಇಲ್ಲ ಎಂದು ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಯಾವುದೇ ಕೋರಿಕೆ ಇಲ್ಲದೆ ಯುವತಿಗೆ ಆಕೆಯ ಪೋಷಕರು ನೀಡುವ ಚಿನ್ನಾಭರಣಗಳು ವರದಕ್ಷಿಣೆಗೆ ಒಳಪಡುವುದಿಲ್ಲ. ಈ ಕಾರಣ ನೀಡಿ ವರದಕ್ಷಿಣೆ ನಿಷೇಧ ಅಧಿಕಾರಿಯ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತು. ಲಾಕರ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ಹಾಗೂ ವಧುವಿನ ಮನೆಯವರು ನೀಡಿದ ನೆಕ್ಲೇಸ್ ನ್ನು ವಾಪಸ್ ನೀಡುವುದಾಗಿ ಫಿರ್ಯಾದಿದಾರರಿಗೆ ತಿಳಿಸಿರುತ್ತಾರೆ. ಮಹಿಳೆಯೂ ಒಪ್ಪಿ ಅರ್ಜಿ ಇತ್ಯರ್ಥಪಡಿಸಿದರು.