ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಮೆಟ್ರೋ ರೈಲು ಯೋಜನೆಯ ಪೂರ್ಣಗೊಂಡ ಭಾಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉದ್ಘಾಟಿಸಿದರು.
ಸದ್ಯ ಪೂರ್ಣಗೊಂಡ 9 ಕಿಮೀ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ ಪ್ರಧಾನಿ, ಬಳಿಕ ಐಐಟಿ ಕಾನ್ಪುರ ಮೆಟ್ರೋ ನಿಲ್ದಾಣದಿಂದ ಗೀತಾ ನಗರದವರೆಗೆ ರೈಲಿನಲ್ಲಿ 10 ನಿಮಿಷಗಳ ಕಾಲ ಪ್ರಯಾಣ ಮಾಡಿದರು.
ಈ ಪ್ರಯಾಣಕ್ಕಾಗಿ ಅವರು ಟಿಕೆಟ್ ಕೂಡ ಖರೀದಿ ಮಾಡಿದ್ದಾರೆ. ಈ ವೇಳೆ ಪ್ರಧಾನಿಯೊಂದಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಸಹ ಇದ್ದರು.
ಕಾನ್ಪುರ ಮೆಟ್ರೋ ರೈಲು ಯೋಜನೆಯು ಎರಡು ಕಾರಿಡಾರ್‌ಗಳನ್ನು ಒಳಗೊಂಡಿದ್ದು, ಒಟ್ಟು 32.5 ಕಿಮೀ ಉದ್ದವನ್ನು ಹೊಂದಿದೆ.
ಐಐಟಿ-ಕಾನ್ಪುರದಿಂದ ನೌಬಸ್ತಾದವರೆಗಿನ ಮೊದಲ ಕಾರಿಡಾರ್ 23.8 ಕಿಮೀ ಉದ್ದವಿದ್ದರೆ, ಚಂದ್ರಶೇಖರ್ ಆಜಾದ್ ಕೃಷಿ ವಿಶ್ವವಿದ್ಯಾಲಯದಿಂದ ಬಾರ್ರಾ-8 ವರೆಗಿನ ಎರಡನೇ ಕಾರಿಡಾರ್ 8.6 ಕಿಮೀ ಉದ್ದವಿದೆ.
ಬುಧವಾರದಿಂದ ಪ್ರತಿದಿನ ಬೆಳಗ್ಗೆ 6 ರಿಂದ ರಾತ್ರಿ 10ರವರೆಗೆ ಮೆಟ್ರೋ ಸೇವೆ ಲಭ್ಯವಿರುತ್ತದೆ.