ಲಖನೌ: ಕೋವಿಡ್-19 ಹೊಸ ರೂಪಾಂತರಿ ಓಮೈಕ್ರಾನ್ ದೇಶಾದ್ಯಂತ ಹೆಚ್ಚುತ್ತಿರುವ ಕಾರಣ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯಾದ್ಯಂತ ಡಿಸೆಂಬರ್ 25 ರಿಂದ ರಾತ್ರಿ ಕರ್ಫ್ಯೂ ಜಾರಿ ಮಾಡಿದೆ.
ರಾತ್ರಿ ಕರ್ಫ್ಯೂ ಡಿಸೆಂಬರ್ 25ರಿಂದ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರಲಿದೆ ಎಂದು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ತಿಳಿಸಿದೆ.
ಇದರ ಹೊರತಾಗಿ ಮದುವೆ ಸಮಾರಂಭಗಳಲ್ಲಿ 200ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ ಎಂಬ ಷರತ್ತನ್ನು ಸಹ ಯೋಗಿ ಸರ್ಕಾರ ವಿಧಿಸಿದೆ. ದೇಶದಲ್ಲಿ ಓಮೈಕ್ರಾನ್ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯುಪಿ ಸರ್ಕಾರ ತಿಳಿಸಿದೆ.
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 122 ಓಮೈಕ್ರಾನ್ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಭಾರತದಲ್ಲಿ ಓಮೈಕ್ರಾನ್ ಪ್ರಕರಣ 358ಕ್ಕೆ ಏರಿದೆ. ಇದರಲ್ಲಿ 114 ಮಂದಿ ಚೇತರಿಕೆ ಕಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.
ಇದುವರೆಗೆ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 358 ಓಮೈಕ್ರಾನ್ ಕೋವಿಡ್ ರೂಪಾಂತರಿ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು 88 ಓಮೈಕ್ರಾನ್ ಪ್ರಕರಣಗಳು ದಾಖಲಾಗಿದ್ದು, ದೆಹಲಿಯಲ್ಲಿ 67, ತೆಲಂಗಾಣ 38, ತಮಿಳುನಾಡು 34, ಕರ್ನಾಟಕ 31 ಮತ್ತು ಗುಜರಾತ್ ನಲ್ಲಿ 30 ಪ್ರಕರಣಗಳು ದಾಖಲಾಗಿವೆ.