ಮುಂಬ್ಯೆ: ದಕ್ಷಿಣ ಭಾರತದ ರಾಜ್ಯಗಳಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಳೆಯ ಜೊತೆಗೆ ಉಷ್ಣಾಂಶ ಸಹ ಕುಸಿತವಾಗಲಿದೆ ಎಂದು ಇಲಾಖೆ ಹೇಳಿದೆ.
ಈ ಬಾರಿ ನೈಋತ್ಯ ಮುಂಗಾರು ಅವಧಿಯಿಂದಲೂ ದೇಶದ ವಿವಿಧ ರಾಜ್ಯಗಳಲ್ಲಿ ಮಳೆಯಾಗುತ್ತಲೇ ಇದೆ. ಅಕ್ಟೋಬರ್, ನವೆಂಬರ್ ತಿಂಗಳಿನಲ್ಲಿಯೂ ಅಕಾಲಿಕ ಮಳೆಯಾಗಿದೆ. 'ಜವಾದ್' ಚಂಡಮಾರುತದ ಪ್ರಭಾವ ದೇಶದಲ್ಲಿ ಕಡಿಮೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಆಂಧ್ರ ಪ್ರದೇಶ, ರಾಯಲಸೀಮಾ, ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ, ಮಾಹೆಯಲ್ಲಿ ಮುಂದಿನ ದಿನ ಐದು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಟ್ಟಿದೆ.
ಕರ್ನಾಟಕ ಮತ್ತು ತೆಲಂಗಾಣದದಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ. ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ನೆಚ್ಚರಿಕೆಯನ್ನು ನೀಡಲಾಗಿದೆ. ದಕ್ಷಿಣ ಭಾರತದಲ್ಲಿ ಮಾತ್ರ ಮಳೆಯಾಗಲಿದ್ದು, ದೇಶದ ಉತ್ತರ ಭಾಗದಲ್ಲಿ ಒಣಹವೆ ಮುಂದುವರೆಯಲಿದೆ.
ದಕ್ಷಿಣ ಭಾರತದ ರಾಜ್ಯಗಳಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯ ಜೊತೆಗೆ ಉಷ್ಣಾಂಶ ಸಹ ಕುಸಿತವಾಗಲಿದ್ದು, ಚಳಿಯ ಅನುಭವವಾಗಲಿದೆ. ಉತ್ತರ ಭಾರತದದಲ್ಲಿ ಉಷ್ಣಾಂಶದಲ್ಲಿ ಯಾವುದೇ ಕುಸಿತವಾಗುವುದಿಲ್ಲ.
ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರದಲ್ಲಿ ಮುಂದಿನ 24 ಗಂಟೆಗಳ ಕಾಲ ಮಂಜು ಕವಿದ ವಾತಾವರಣ ಇರಲಿದೆ. ಶನಿವಾರದ ಬಳಿಕ ವಾತಾವರಣ ಸಹಜ ಸ್ಥಿತಿಗೆ ಮರಳಲಿದೆ.
ಜೂನ್ ತಿಂಗಳಿನಿಂದ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಮಳೆಯಾಗುತ್ತಿದೆ. ಪ್ರವಾಹ ಮತ್ತು ಭೂ ಕುಸಿತದ ಪ್ರಕರಣಗಳು ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಉತ್ತರಾಖಂಡ್ ರಾಜ್ಯಗಳಲ್ಲಿ ವರದಿಯಾಗಿವೆ. ಪಶ್ಚಿಮ ಬಂಗಾಳ ರಾಜ್ಯದಲ್ಲಿ ಸಹ ಈ ವರ್ಷ ವಾಡಿಕೆಗಿಂತಲೂ ಅಧಿಕ ಮಳೆಯಾಗಿದೆ.