ಕಾಸರಗೋಡು: ಬೇಕಲ ಕೋಟೆ ಆಸುಪಾಸು ಪ್ರಬಲ ಭೂಕಂಪವುಂಟಾಗಿದ್ದು, ಸನಿಹದ ಹಳೇ ಕಟ್ಟಡವೊಂದು ಕುಸಿದು ಬಿದ್ದಿದೆ. ಇದರೊಳಗೆ ಸಿಲುಕಿಕೊಂಡ ಹತ್ತು ಮಂದಿಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ(ಎನ್‍ಡಿಆರ್‍ಎಫ್)ದ ಯೋಧರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.7 ದಾಖಲಾಗಿತ್ತು! ಇದು ಎನ್‍ಡಿಆರ್‍ಎಫ್ ಬೇಕಲ ಕೋಟೆ ಸನಿಹ ಬುಧವಾರ ನಡೆಸಿದ ಕಲ್ಪಿತ ಕಾರ್ಯಾಚರಣೆಯಾಗಿದ್ದು, ಆರಂಭದಲ್ಲಿ ಸಾರ್ವಜನಿಕರಲ್ಲಿ ಭೀತಿಗೂ ಕಾರಣವಾಯಿತು.
ಅಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ದೇಶದ ಇತಿಹಾಸ ಪ್ರಸಿದ್ಧ ಕೇಂದ್ರಗಳಲ್ಲಿ ಎನ್‍ಡಿಆರ್‍ಎಫ್ ಅಣಕು ಪ್ರದರ್ಶನ ನಡೆಸಿಕೊಂಡು ಬರುತ್ತಿದ್ದು, ಈ ನಿಟ್ಟಿನಲ್ಲಿ ಬೇಕಲ ಕೋಟೆಯನ್ನು ಆಯ್ಕೆಮಾಡಲಾಗಿತ್ತು. ಭೂಕಂಪ ಸಂಭವಿಸಿದಲ್ಲಿ ಸನಿಹದ ಕಟ್ಟಡದಲ್ಲಿ ಸಂಕಷ್ಟಕ್ಕೆ ಸಿಲುಕುವ ಹತ್ತು ಮಂದಿಯನ್ನು ಪಾರುಮಾಡುವ ಬಗ್ಗೆ ಕಲ್ಪಿತ ಕಾರ್ಯಾಚರಣೆ ನಡೆಸಲಾಗಿದೆ. ಕಟ್ಟಡದೊಳಗೆ ಸಿಲುಕಿಕೊಳ್ಳುವವರನ್ನು ರಕ್ಷಿಸಿ, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯುವ ಬಗ್ಗೆ ವಿಶೇಷ ತರಬೇತಿ ಪಡೆದ ಎನ್‍ಡಿಆರ್‍ಎಫ್ ಯೋಧರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಎನ್‍ಡಿಆರ್‍ಎಫ್ ನಾಲ್ಕನೇ ಬೆಟಾಲಿಯನ್ ಇನ್ಸ್‍ಪೆಕ್ಟರ್ ಅರ್ಜುನ್‍ಪಾಲ್ ರಜಪೂತ್ ನೇತೃತ್ವದ 28ಮಂದಿ ಎನ್‍ಡಿಆರ್‍ಎಫ್ ಯೋಧರು, ಅಗ್ನಿಶಾಮಕ ದಳ, ಬೇಕಲ ಪೊಲೀಸರು ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದರು. ಅಪರ ಜಿಲ್ಲಾಧಿಕಾರಿ ಡಿ.ಆರ್. ಮೇಘಶ್ರೀ, ಎಡಿಎಂ ರಮೇಂದ್ರನ್, ಕಂದಾಯ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.