ನವದೆಹಲಿ: ದೇಶದಲ್ಲಿ ಪ್ರತಿವರ್ಷ ಡಿಸೆಂಬರ್ 23ನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ. ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಸ್ಮರಣಾರ್ಥ ಅವರ ಜನ್ಮದಿನವನ್ನು ಕಿಸಾನ್ ದಿವಸ ಎಂದು ಆಚರಿಸಲಾಗುತ್ತದೆ.
ಚೌಧರಿ ಚರಣ್ ಸಿಂಗ್ ಅವರು ಅಲ್ಪಾವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿದ್ದವರು. ಜುಲೈ 1979ರಲ್ಲಿ ಪ್ರಧಾನಿಯಾಗಿ ಹುದ್ದೆ ವಹಿಸಿ 1980ರ ಜನವರಿಯವರಿಗೆ ಇದ್ದರು. ಈ ಅವಧಿಯಲ್ಲಿ ರೈತರ ಕಲ್ಯಾಣಕ್ಕೆ ಅವರು ತಂದ ಯೋಜನೆಗಳು ಇಂದಿಗೂ ಜನಪ್ರಿಯ. ರೈತರ ಪರವಾಗಿ ರೈತಸ್ನೇಹಿ ಯೋಜನೆಗಳನ್ನು ತಂದದ್ದಕ್ಕಾಗಿ ಅವರ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ.
ಚೌಧರಿ ಚರಣ್ ಸಿಂಗ್ ಮೀರತ್ ನ ನೂರ್ಪುರ್ ನಲ್ಲಿ 1902ರ ಡಿಸೆಂಬರ್ 23ರಂದು ಜನಿಸಿದರು. ಕೃಷಿ ಆರ್ಥಿಕತೆಯ ಮಹತ್ವವನ್ನು ಅವರು ಅರಿತು ದೇಶದ ರೈತರ ಪರಿಸ್ಥಿತಿಯನ್ನು ಗುರುತಿಸಿ ಅದಕ್ಕೆ ಪೂರಕವಾದ ಯೋಜನೆಗಳನ್ನು ತಂದಿದ್ದರು. ಪಂಡಿತ್ ಜವಹರಲಾಲ್ ನೆಹರೂ ಅವರನ್ನು ವಿರೋಧಿಸಿ ಅದ್ವಿತೀಯ ನಾಯಕ ಎನಿಸಿಕೊಂಡಿದ್ದರು. 1959ರ ನಾಗ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಚೌಧರಿಯವರು, ನೆಹರೂರವರನ್ನು ಸಾರ್ವಜನಿಕವಾಗಿಯೇ ಅವರ ಸಾಮೂಹಿಕ ಮತ್ತು ಸಾಮಾಜಿಕ ನೀತಿಗಳನ್ನು ವಿರೋಧಿಸಿದ್ದರು.
ಚೌಧರಿ ಚರಣ್ ಸಿಂಗ್ ಸ್ಮಾರಕವನ್ನು ಕಿಸಾನ್ ಘಾಟ್ ಎಂದು ಕರೆಯಲಾಗುತ್ತದೆ. ಲಕ್ನೊದ ಅಮೌಸಿ ವಿಮಾನ ನಿಲ್ದಾಣವನ್ನು ಚೌಧರಿ ಚರಣ್ ಸಿಂಗ್ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಲಾಗಿದೆ. ಮೀರತ್ ವಿಶ್ವವಿದ್ಯಾಲಯವನ್ನು ಸಹ ಚೌದರಿ ಚರಣ್ ಸಿಂಗ್ ವಿ ವಿ ಎಂದು ಮರು ನಾಮಕರಣ ಮಾಡಲಾಗಿದೆ.
ಸರಳ ಜೀವನದಲ್ಲಿ ನಂಬಿಕೆಯಿಟ್ಟಿದ್ದ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಅವರ ಕೊಡುಗೆಗಳನ್ನು ಗುರುತಿಸಿ ಭಾರತ ಸರ್ಕಾರ ಹಲವು ಬಾರಿ ಸನ್ಮಾನಿಸಿತ್ತು.