ನವದೆಹಲಿ: ಪ್ರಕರಣಗಳ ದಾಖಲಾತಿಗೆ ಮತ್ತು ಸಾಮಾನ್ಯವಾಗಿ ಬಳಸುವ ನ್ಯಾಯಾಂಗ ನಿಯಮಗಳು, ನುಡಿಗಟ್ಟುಗಳು ಮತ್ತು ಸಂಕ್ಷೇಪಣಗಳನ್ನು ಒಳಗೊಂಡ ನ್ಯಾಯಾಂಗ ಸಂಹಿತೆಯೊಂದನ್ನು ಅಳವಡಿಸಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಮನವಿಯೊಂದನ್ನು ಸಲ್ಲಿಸಲಾಗಿದೆ.
ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಈ ಮನವಿ ಸಲ್ಲಿಸಿದ್ದು, ನ್ಯಾಯಾಂಗ ಸಂಹಿತೆ, ಪ್ರಕರಣ ದಾಖಲಾತಿ ಮತ್ತು ನ್ಯಾಯಾಲಯ ಶುಲ್ಕದಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳಲು ಹೈಕೋರ್ಟ್‌ಗಳೊಂದಿಗೆ ಸಮಾಲೋಚಿಸಿ ವರದಿಯೊಂದನ್ನು ತಯಾರಿಸುವಂತೆ ಕಾನೂನು ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
'ವಿವಿಧ ಪ್ರಕರಣಗಳಲ್ಲಿ ವಿವಿಧ ಹೈಕೋರ್ಟ್‌ಗಳು ಬಳಸುವ ಪಾರಿಭಾಷಿಕ ಪದಗಳು ಏಕರೂಪವಾಗಿಲ್ಲ. ಇದರಿಂದ ಸಾರ್ವವಜನಿಕರಿಗೆ ಮಾತ್ರವಲ್ಲ, ವಕೀಲರು, ಅಧಿಕಾರಿಗಳಿಗೂ ಅನಾನುಕೂಲತೆ ಉಂಟಾಗುತ್ತದೆ' ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ನ್ಯಾಯಾಂಗ ನಿಯಮಗಳು ಮಾತ್ರವಲ್ಲದೆ ವಿವಿಧ ಪ್ರಕರಣಗಳಿಗೆ ವಿಧಿಸುವ ಶುಲ್ಕಗಳಲ್ಲೂ ವ್ಯತ್ಯಾಸವಿದೆ. ಇದು ಕಾನೂನಿಗೆ ವಿರುದ್ಧವಾದುದು ಎಂದೂ ತಿಳಿಸಲಾಗಿದೆ.