ಪಣಜಿ: ಮರ್ಚೆಂಟ್ ನೌಕಾಪಡೆಯ ಹಡಗಿನಲ್ಲಿ ಗೋವಾಕ್ಕೆ ಆಗಮಿಸಿದ ಇಬ್ಬರು ರಷ್ಯನ್ ಪ್ರಜೆಗಳು ಸೇರಿದಂತೆ ಐವರಲ್ಲಿ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟಿದ್ದು ಅವರನ್ನು ಐಸೋಲೇಷನ್ ನಲ್ಲಿ ಇಡಲಾಗಿದೆ. ಇನ್ನು ಓಮಿಕ್ರಾನ್ ರೂಪಾಂತರ ಸೋಂಕು ತಗುಲಿದೆಯಾ ಎಂದು ಪತ್ತೆಹಚ್ಚಲು ಅವರ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐವರನ್ನು ಓಮಿಕ್ರಾನ್ ಶಂಕಿತರು ಎಂದು ಪರಿಗಣಿಸಲಾಗುತ್ತಿದ್ದು, ಬುಧವಾರ ಅಥವಾ ಗುರುವಾರ ನೆರೆಯ ಮಹಾರಾಷ್ಟ್ರದ ಪುಣೆಯಿಂದ ಜೀನೋಮ್ ಟೆಸ್ಟ್ ವರದಿಗಳು ಬರುವ ನಿರೀಕ್ಷೆಯಿದೆ ಎಂದು ರಾಜ್ಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಉತ್ಕರ್ಷ್ ಬೆಟೋಡ್ಕರ್ ಹೇಳಿದ್ದಾರೆ.
'ಅಕ್ಟೋಬರ್ 31ರಂದು ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಿಂದ ಹೊರಟ ನಂತರ ಹಡಗು ನವೆಂಬರ್ 18ರಂದು ಗೋವಾಕ್ಕೆ ಬಂದಿತ್ತು. ಅದರಲ್ಲಿ ಇಬ್ಬರು ರಷ್ಯನ್ನರು ಆಗಮಿಸಿದ್ದರು. ಮೊದಲಿಗೆ ಸಿಬ್ಬಂದಿಯನ್ನು ಪರೀಕ್ಷಿಸಿದಾಗ ಐವರಲ್ಲೂ ಕೊರೋನಾ ದೃಢಪಟ್ಟಿತ್ತು.
ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಐವರನ್ನು ಕಾನ್ಸೌಲಿಮ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರತ್ಯೇಕಿಸಲಾಗಿದೆ ಎಂದು ಅವರು ಹೇಳಿದರು.
ಏತನ್ಮಧ್ಯೆ, ಇನ್ನೂ ಮೂವರು ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಇಬ್ಬರು ಕೋವಿಡ್ -19 ಪಾಸಿಟಿವ್ ಮತ್ತು ಇನ್ನೊಂದು ಶಂಕಿತ ಪ್ರಕರಣವಿದ್ದು, ಹೊಸ ರೂಪಾಂತರ ಓಮಿಕ್ರಾನ್ ಸೋಂಕಿತರನ್ನು ಪ್ರತ್ಯೇಕಿಸಲು ಮತ್ತು ಚಿಕಿತ್ಸೆಗಾಗಿ ದೆಹಲಿ ಸರ್ಕಾರ ನಡೆಸುವ ಲೋಕನಾಯಕ್ ಆಸ್ಪತ್ರೆಯ ವಿಶೇಷ ಸೌಲಭ್ಯಕ್ಕೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.