ನವದೆಹಲಿ: ಹೆಲಿಕಾಪ್ಟರ್ ದುರಂತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
'ಡಿಸೆಂಬರ್ 8ರ ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡು ಬದುಕುಳಿದಿದ್ದ ಶೌರ್ಯವಂತ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ನಮ್ಮನ್ನು ಅಗಲಿದ್ದಾರೆ.
ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ವಾಯುಪಡೆಯ ಹೆಲಿಕಾಪ್ಟರ್ ದುರಂತದಲ್ಲಿ ವರುಣ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು.
ಕಳೆದ ಗುರುವಾರ ತಮಿಳುನಾಡಿನ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ವರುಣ್ ಅವರನ್ನು ಬೆಂಗಳೂರಿನ ಕಮಾಂಡೊ ಆಸ್ಪತ್ರೆಗೆ ಕರೆತರಲಾಗಿತ್ತು.
ಹೆಲಿಕಾಪ್ಟರ್ ಅವಘಡದಲ್ಲಿ ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಮಧುಲಿಕಾ ಸೇರಿ 13 ಮಂದಿ ಮೃತಪಟ್ಟಿದ್ದರು.
ಇತ್ತೀಚೆಗೆ ವರುಣ್ ಅವರ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಯ ಚರ್ಮ ಬ್ಯಾಂಕ್‌ನಿಂದ ಕಮಾಂಡೊ ಆಸ್ಪತ್ರೆಗೆ ಚರ್ಮ ರವಾನಿಸಲಾಗಿತ್ತು.
'ವರುಣ್ ಸಿಂಗ್ ಅವರ ದೇಹದಲ್ಲಿ ಅಪಾರ ಪ್ರಮಾಣದ ಸುಟ್ಟ ಗಾಯಗಳಾಗಿವೆ. ಅವರಿಗೆ ಸಾಕಷ್ಟು ಚರ್ಮದ ಅಗತ್ಯವಿದೆ. ಕಮಾಂಡೊ ಆಸ್ಪತ್ರೆಯವರ ಮನವಿ ಮೇರೆಗೆ 1 ಸಾವಿರ ಚದರ ಸೆಂ.ಮೀ. ಚರ್ಮವನ್ನು ನೀಡಲಾಗಿದೆ. ಇನ್ನಷ್ಟು ಚರ್ಮ ಬೇಕಾದರೆ ಮುಂಬೈ ಮತ್ತು ಚೆನ್ನೈನಲ್ಲಿರುವ ಚರ್ಮ ಬ್ಯಾಂಕ್‌ಗಳಿಂದ ತರಿಸಿ ಕೊಡಲಾಗುತ್ತದೆ' ಎಂದು ವಿಕ್ಟೋರಿಯಾ ಆಸ್ಪತ್ರೆಯ ಮೂಲಗಳು ತಿಳಿಸಿದ್ದವು.
ಕಳೆದ ವರ್ಷ ತೇಜಸ್ ಯುದ್ಧ ವಿಮಾನವನ್ನು ಅಪಘಾತದಿಂದ ತಪ್ಪಿಸಿದ್ದಕ್ಕಾಗಿ ಆಗಸ್ಟ್‌ನಲ್ಲಿ ವರುಣ್ ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
'ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ರಾಷ್ಟ್ರಕ್ಕೆ ಹೆಮ್ಮೆ, ಶೌರ್ಯ ಮತ್ತು ಅತ್ಯಂತ ವೃತ್ತಿಪರತೆಯೊಂದಿಗೆ ಸೇವೆ ಸಲ್ಲಿಸಿದ್ದರು.
'ಐಎಎಫ್ ಪೈಲಟ್, ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನದ ಸುದ್ದಿ ತಿಳಿಯಲಾಗದಷ್ಟು ನೋವಾಗಿದೆ. ಕೊನೆಯುಸಿರಿರುವವರೆಗೂ ಹೋರಾಡಿದ ನಿಜವಾದ ಹೋರಾಟಗಾರ. ಅವರ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು. ಈ ದುಃಖದ ಸಮಯದಲ್ಲಿ ನಾವು ಕುಟುಂಬದೊಂದಿಗೆ ನಿಲ್ಲುತ್ತೇವೆ' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
}ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರ ನಿಧನ ಸುದ್ದಿ ತಿಳಿದು ತೀವ್ರ ನೋವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ' ಎಂದು ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
}ಡಿ.8ರಂದು ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ವಾಯುಪಡೆಯ ಹೆಲಿಕಾಪ್ಟರ್ ದುರಂತದಲ್ಲಿ ವರುಣ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೆ ಅವರು ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ.