ನ್ಯೂಯಾರ್ಕ್: ಕಳೆದೆರಡು ವರ್ಷಗಳಿಂದ ಕೊರೊನಾ ವೈರಸ್ ಜಗತ್ತಿನ ಎಲ್ಲಾ ಜನರನ್ನು ಅಕ್ಷರಶಃ ಕಂಗೆಡಿಸಿಬಿಟ್ಟಿದೆ. ಅದರ ಕರಿನೆರಳು ಇಂದಿಗೂ ಮನೆಮನೆಯ ಎದುರೇ ನಿಂತಿರುವಾಗಿ ಒಮಿಕ್ರಾನ್ ರೂಪಾಂತರಿ ಬಂದು ಮತ್ತಷ್ಟು ನಿದ್ದೆಗೆಡಿಸಿವೆ. ಒಂದೆಡೆ ಕರೊನಾಕ್ಕೆ ಇನ್ನಷ್ಟು ಔಷಧಗಳನ್ನು ಕಂಡುಹಿಡಿಯುತ್ತಿರುವ ನಡುವೆಯೇ ಇದೀಗ ಚ್ಯೂಯಿಂಗ್ ಗಮ್ ಒಂದು ಭಾರಿ ಸದ್ದು ಮಾಡುತ್ತಿದೆ.
ಅಮೆರಿಕದ ಪೆನ್ಸಿಲ್‌ವಾನಿಯಾ ವಿಶ್ವವಿದ್ಯಾಲಯದಿಂದ ಅಚ್ಚರಿ ಎನ್ನುವಂಥ ಸಂಶೋಧನೆ ಒಂದು ಬಂದಿದೆ. ಇಲ್ಲಿಯ ತಜ್ಞರು ಚ್ಯೂಯಿಂಗ್ ಗಮ್ ಒಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇದನ್ನು ಮೆಲ್ಲುವುದರಿಂದ ಕೊರೊನಾ ಸೋಂಕು ನಮ್ಮನ್ನು ಬಾಧಿಸದಂತೆ ತಡೆಗಟ್ಟಬಹುದು ಎನ್ನುವುದು ಅವರ ಅಭಿಮತ.
ಇದರ ಬಗ್ಗೆ ವಿವರಣೆ ನೀಡಿರುವ ತಜ್ಞರು ಇದು ಸಾಮಾನ್ಯವಾಗಿರುವ ಚ್ಯೂಯಿಂಗ್ ಗಮ್‌ನಂತೆ ಅಲ್ಲ. ಇದನ್ನು ನಾವೇ ಅಭಿವೃದ್ಧಿ ಪಡಿಸಿರುವುದು, ಈ ಚ್ಯೂಯಿಂಗ್‌ಗಮ್ ಜೊಲ್ಲುರಸದ ಮೂಲಕ ಕರೊನಾ ಸೋಂಕು ಹರಡುವುದನ್ನು ಕಡಿಮೆ ಮಾಡುವುದಾಗಿ ಸಾಬೀತಾಗಿದೆ ಎಂದಿದ್ದಾರೆ. ಈ ಚ್ಯೂಯಿಂಗ್ ಗಮ್ ಬಿಡುಗಡೆ ಮಾಡುವ ಪ್ರೊಟೀನ್ ಸೋಂಕನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಆದ್ದರಿಂದ ಇದು ಬಹಳ ಪ್ರಯೋಜನಕಾರಿ. ಈ ಪಡೆಯುತ್ತಿರುವ ಲಸಿಕೆಯ ಜತೆಗೆ ಈ ಚ್ಯೂಯಿಂಗ್ ಗಮ್ ತಿಂದರೆ ಕರೊನಾ ಸೋಂಕಿನಿಂದ ಸಾಧ್ಯವಾದಷ್ಟು ಮಟ್ಟಿಗೆ ದೂರು ಉಳಿಯಬಹುದು ಎಂದಿದ್ದಾರೆ. ಇದರ ಮೇಲ್ಭಾಗದಲ್ಲಿ ಎಸಿಇ2 ಅಂಶ ಇದೆ. ಇದು ಸೋಂಕು ತಡೆಗಟ್ಟಲು ಸಹಕಾರಿಯಾಗಿದೆ. ಶೇಕಡಾ 95ರಷ್ಟು ಇದು ಫಲಿತಾಂಶ ನೀಡಬಲ್ಲುದು. ಜತೆಗೆ ಕರೊನಾ ರೋಗಿ ಈ ಚ್ಯೂಯಿಂಗ್ ಗಮ್ ತಿಂದರೆ ಇದು ಬೇರೆಯವರಿಗೆ ಹರಡುವುದನ್ನೂ ತಪ್ಪಿಸಬಹುದಾಗಿದೆ ಎಂದಿದ್ದಾರೆ.
ಸದ್ಯ ಇದು ಮಾರುಕಟ್ಟೆಗೆ ಬಿಡುಗಡೆಯಾಗಲಿಲ್ಲ. ಕೆಲವೊಂದು ಪರೀಕ್ಷೆಗಳು ಕೊನೆ ಹಂತದಲ್ಲಿದ್ದು, ಅದೆಲ್ಲ ಮುಗಿದ ಬಳಿಕ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ.