ನವದೆಹಲಿ: ಕೋವಾಕ್ಸಿನ್ ಲಸಿಕೆ 2-18 ವಯಸ್ಸಿನವರಿಗೆ ಸುರಕ್ಷಿತವಾಗಿದೆ, ಚೆನ್ನಾಗಿ ಸಹಿಸಿಕೊಳ್ಳುತ್ತದೆ ಮತ್ತು ರೋಗನಿರೋಧಕವಾಗಿದೆ ಎಂದು ಅದರ ತಯಾರಿಕ ಕಂಪನಿ ಭಾರತ್ ಬಯೋಟೆಕ್ ಗುರುವಾರ ಹೇಳಿದೆ. ಜನವರಿ 3 ರಿಂದ ದೇಶದಲ್ಲಿನ 15 ರಿಂದ 17 ವರ್ಷದ ಮಕ್ಕಳಿಗೆ ಸದ್ಯ ಕೋವಾಕ್ಸಿನ್ ಲಸಿಕೆಯನ್ನು ಮಾತ್ರ ನೀಡಲಾಗುವುದು ಎಂದು ಸರ್ಕಾರ ಘೋಷಿಸಿದ ನಂತರ ಭಾರತ್ ಬಯೋಟೆಕ್ ಕಂಪನಿ ಈ ರೀತಿಯ ಹೇಳಿಕೆ ನೀಡಿದೆ.
ಕೋವಾಕ್ಸಿನ್ ಲಸಿಕೆ ಎರಡು ಮತ್ತು ಮೂರನೇ ಹಂತದ ಪ್ರಾಯೋಗಿಕ ಪರೀಕ್ಷೆಯ ಮಾಹಿತಿಯನ್ನು ಉಲ್ಲೇಖಿಸಿರುವ ಕಂಪನಿ, ಮಕ್ಕಳಲ್ಲಿ ತಟಸ್ಥಗೊಳಿಸುವ ಪ್ರತಿಕಾಯಗಳು, ಸರಾಸರಿಯಾಗಿ ವಯಸ್ಕರಿಗಿಂತ 1.7 ಪಟ್ಟು ಹೆಚ್ಚು ಕಂಡುಬಂದಿವೆ ಎಂದು ಹೇಳಿದೆ.
12-18, 6-12 ಮತ್ತು 2-6 ವರ್ಷದೊಳಗಿನ ಮೂರು ಗುಂಪುಗಳಲ್ಲಿ ನಡೆಸಿದ ಪ್ರಯೋಗ ಪರೀಕ್ಷೆಯಲ್ಲಿ ಒಟ್ಟು 525 ಮಕ್ಕಳು ಪಾಲ್ಗೊಂಡಿದ್ದರು. ಜೂನ್ 2021 ರಿಂದ ಸೆಪ್ಟೆಂಬರ್ 2021ರ ನಡುವೆ ಮಕ್ಕಳಲ್ಲಿ ನಡೆಸಲಾದ ಕ್ಲಿನಿಕಲ್ ಪರೀಕ್ಷೆಯಲ್ಲಿ ಹೆಚ್ಚಿನ ಸುರಕ್ಷತೆ, ಇಮ್ಯುನೊಜೆನಿಸಿಟಿ ಕಂಡುಬಂದಿದೆ ಎಂದು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ ಬಯೋಟೆಕ್ ಕಂಪನಿ ಮಾಹಿತಿ ಸಲ್ಲಿಸಿದೆ.
ಅಧ್ಯಯನ ವೇಳೆಯಲ್ಲಿ ಯಾವುದೇ ಗಂಭೀರ ರೀತಿಯ ಅಡ್ಡ ಪರಿಣಾಮ ಕಂಡುಬಂದಿಲ್ಲ. ಶೇಕಡಾ 78.6 ರೊಂದಿಗೆ ಸೌಮ್ಯ ಅಥವಾ ಸಾಧಾರಣ ರೀತಿಯ ತೀವ್ರ ರೋಗ ಲಕ್ಷಣ ಕಂಡುಬಂದಿತ್ತು. ಆದರೆ, ಅವುಗಳು ಒಂದು ದಿನದಲ್ಲಿಯೇ ಪರಿಹಾರವಾಗಿದೆ. ಹದಿಹರೆಯದವರು ಲಸಿಕೆ ಪಡೆದಾಗ ಬರುವ ನೋವಿನಂತೆ ಸಾಮಾನ್ಯವಾಗಿ ನೋವು ಕಾಣಿಸಿಕೊಳ್ಳುತ್ತಿದೆ. ವಯಸ್ಕರಿಗೆ ಹೋಲಿಸಿದರೆ ಮಕ್ಕಳಲ್ಲಿ ಹೆಚ್ಚಿನ ರೋಗ ನಿರೋಧಕ ಶಕ್ತಿ ಕಂಡುಬಂದಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಮಕ್ಕಳಿಗೆ ಲಸಿಕೆ ಸುರಕ್ಷಿತವಾಗಿದೆ. ಕೋವಾಕ್ಸಿನ್ ಲಸಿಕೆಯಿಂದ ಮಕ್ಕಳಲ್ಲಿ ಇಮ್ಯೂಜಿನಿಟಿ ಸಾಬೀತಾಗಿರುವ ಮಾಹಿತಿಯನ್ನು ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯೊಂದಿಗೆ ಹಂಚಿಕೊಂಡಿರುವುದಾಗಿ ಕಂಪನಿ ಮುಖ್ಯಸ್ಥ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಕೃಷ್ಣಾ ಎಲಾ ತಿಳಿಸಿದ್ದಾರೆ. ವಯಸ್ಕರು ಮತ್ತು ಮಕ್ಕಳಿಗೆ ಸುರಕ್ಷಿತ ಮತ್ತು ಪರಿಣಾಮಕಾರಿ ಕೋವಿಡ್-19 ಲಸಿಕೆ ಅಭಿವೃದ್ಧಿ ಗುರಿಯನ್ನು ನಾವು ಸಾಧಿಸಿದ್ದೇವೆ. ಸೋಂಕಿನಿಂದ ರಕ್ಷಿಸಿಕೊಳ್ಳಲು ಲಸಿಕೆಗಳು ಪ್ರಮುಖ ಸಾಧನಗಳಾಗಿವೆ ಎಂದು ಅವರು ಹೇಳಿದ್ದಾರೆ.