ಚೆನ್ನೈ: ತಮಿಳು ಭಾಷೆಯ ಹಿರಿಮೆಯನ್ನು ಶ್ಲಾಘಿಸುವ ಸ್ವಾಗತ ಗೀತೆ 'ತಮಿಳ್ ತಾಯ್ ವಜುತು' ಅನ್ನು ನಾಡಗೀತೆಯಾಗಿ ತಮಿಳುನಾಡು ಸರ್ಕಾರ ಶುಕ್ರವಾರ ಘೋಷಿಸಿದೆ.
ಚೆನ್ನೈ: ತಮಿಳು ಭಾಷೆಯ ಹಿರಿಮೆಯನ್ನು ಶ್ಲಾಘಿಸುವ ಸ್ವಾಗತ ಗೀತೆ 'ತಮಿಳ್ ತಾಯ್ ವಜುತು' ಅನ್ನು ನಾಡಗೀತೆಯಾಗಿ ತಮಿಳುನಾಡು ಸರ್ಕಾರ ಶುಕ್ರವಾರ ಘೋಷಿಸಿದೆ.
'ಗೀತೆಯ ಅವಧಿ 55 ಸೆಕೆಂಡ್. ನಾಡಗೀತೆಯ ಸ್ಥಾನಮಾನ ನೀಡಿರುವ ಕಾರಣ ಗಾಯನದ ವೇಳೆ ಅಂಗವಿಕಲರನ್ನು ಹೊರತುಪಡಿಸಿ, ಹಾಜರಿರುವ ಎಲ್ಲರೂ ಎದ್ದುನಿಂತು ಗೌರವ ಸಲ್ಲಿಸಬೇಕು' ಎಂದು ಸರ್ಕಾರ ಸೂಚಿಸಿದೆ.
ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ 'ತಮಿಳ್ ತಾಯ್ ವಜುತು' ಕೇವಲ ಪ್ರಾರ್ಥನಾ ಗೀತೆ. ಅದು, ರಾಷ್ಟ್ರಗೀತೆಯಲ್ಲ. ಹೀಗಾಗಿ, ಅದರ ಗಾಯನದ ವೇಳೆ ಎಲ್ಲರೂ ಎದ್ದುನಿಲ್ಲುವ ಅಗತ್ಯವಿಲ್ಲ ಎಂದು ಹೇಳಿತ್ತು. ಇದರ ಹಿಂದೆಯೇ ರಾಜ್ಯ ಸರ್ಕಾರ ಉಲ್ಲೇಖಿತ ಗೀತೆಗೆ ನಾಡಗೀತೆಯ ಸ್ಥಾನಮಾನವನ್ನು ನೀಡಿ ಆದೇಶ ಹೊರಡಿಸಿದೆ.
ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯ ಸಂಸ್ಥೆಗಳಲ್ಲಿ ಕಾರ್ಯಕ್ರಮ ಆರಂಭಕ್ಕೆ ಮುನ್ನ ಇದರ ಗಾಯನ ಕಡ್ಡಾಯ ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.