ಪತ್ತನಂತಿಟ್ಟ: ದೇವಸ್ವಂ ಇಲಾಖೆಯ ಜವಾಬ್ದಾರಿಯನ್ನು ದೇವರ ಬಗ್ಗೆ ವಿಶ್ವಾಸವಿರುವ ಸಚಿವರಿಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ಆಗ್ರಹಿಸಿದ್ದಾರೆ. ಶಬರಿಮಲೆಗೆ ನಿನ್ನೆ ಭೇಟಿ ನೀಡಿದ ಬಳಿಕ ಸನ್ನಿಧಾನದಲ್ಲಿ ಮಾಧ್ಯಮದವರೊಂದಿಗೆ ಕೆ. ಸುರೇಂದ್ರನ್ ಮಾತನಾಡಿದರು. ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಿದ್ದರೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಸರ್ಕಾರವಾಗಲಿ, ದೇವಸ್ವಂ ಮಂಡಳಿಯಾಗಲಿ ಸಾಧ್ಯವಾಗಿಲ್ಲ ಎಂದು ಸುರೇಂದ್ರನ್ ಸೂಚಿಸಿದರು.
ದೇವಸ್ವಂ ಸಚಿವರಿಗೆ ದೇವಸ್ಥಾನದ ವಿಧಿ ವಿಧಾನ ಏನೆಂಬುದು ಗೊತ್ತಿಲ್ಲ. ಸಚಿವರಾದ ಬಳಿಕ ಅವರು ಪೂರ್ತಿ ಭಕ್ತರ ಪರವಾಗಿರಬೇಕು. ಭಕ್ತರ ಕಲ್ಯಾಣಕ್ಕೆ ಯೋಜನೆಯನ್ನು ಜಾರಿಗೊಳಿಸಬೇಕು. ಯಾತ್ರಾರ್ಥಿಗಳ ಅಗತ್ಯವನ್ನು ಅರಿತು ಕ್ರಮಕೈಗೊಳ್ಳಬೇಕು. ಅದಲ್ಲದಿದ್ದರೆ ನಾನು ನಾಸ್ತಿಕ ಮತ್ತು ಕಮ್ಯುನಿಸ್ಟ್ ಎಂದು ಹೇಳುವುದು ಅವರ ರಾಜಕೀಯ. ಭಕ್ತನಿಗೆ ಯಾವ ಸೌಲಭ್ಯಗಳು ಬೇಕು ಎಂಬುದು ಗೊತ್ತಿಲ್ಲ ಎಂದು ಸುರೇಂದ್ರನ್ ಹೇಳಿದ್ದಾರೆ.
ಶಬರಿಮಲೆ ಯಾತ್ರೆಯ ನೈಜ ಉದ್ದೇಶಕ್ಕೆ ನೆರವಾಗುವ ಯಾವುದೇ ಸೌಲಭ್ಯವನ್ನು ಇವರು ಒದಗಿಸುವುದಿಲ್ಲ. ತುಪ್ಪಾಭಿಷೇಕ ಮತ್ತು ಪಂಪಾ ಸ್ನಾನವನ್ನು ಏಕೆ ಪುನಃಸ್ಥಾಪಿಸಲಾಗಿಲ್ಲ. ಅಭಿಷೇಕಕ್ಕೆ ಯಾವುದೇ ತಡೆ ಇಲ್ಲ ಮತ್ತು ಇದು ಕೊರೋನಾ ಪ್ರೋಟೋಕಾಲ್‍ಗಳಿಗೆ ಒಳಪಟ್ಟಿಲ್ಲ. ತುಪ್ಪಾಭಿಷೇಕವನ್ನು ಮರುಸ್ಥಾಪಿಸಲು ದೇವಸ್ವಂ ಮಂಡಳಿ ಅಡ್ಡಿಯಾಗಿದ್ದು ಏಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಸುರೇಂದ್ರನ್ ಹೇಳಿದರು.
ಪಂಪದಲ್ಲಿ ಕೊರೋನದ ಹೆಸರಿನಲ್ಲಿ ತೀರ್ಥಸ್ನಾನ ಮತ್ತು ತರ್ಪಣವನ್ನು ನಿಷೇಧಿಸಲಾಗಿದೆ. ಉಳಿದ ಕಾಲದಲ್ಲಾದರೂ ಭಕ್ತರಿಗೆ ಅವಕಾಶ ಕಲ್ಪಿಸಬೇಕು. ಪಂಪಾದಿಂದ ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ಶೌಚಾಲಯ ಕೂಡ ತೆರೆದಿಲ್ಲ. ಮೂಲಸೌಕರ್ಯದಲ್ಲಿ ಭಾರಿ ಕೊರತೆ ಉಂಟಾಗಿದೆ ಎಂದು ಅವರು ಆರೋಪಿಸಿದರು. ಸೌಲಭ್ಯಗಳ ಕೊರತೆಯೂ ಜನರಿಗೆ ಅನಾನುಕೂಲವಾಗಿದೆ ಎಂದು ಸುರೇಂದ್ರನ್ ತಿಳಿಸಿರುವರು.