ಮಂಜೇಶ್ವರ : ತನ್ನ ಆಪ್ತ ಗೆಳೆಯನ ಸಹೋದರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇರಳದ ರಾಜ್ಯಪಾಲ ಆರಿಫ್ ಮೊಹ್ಮದ್ ಖಾನ್ ಅವರು ಮೀಯಪದವಿಗೆ ಭಾನುವಾರ ಆಗಮಿಸಿದ್ದರು.
ಮೀಯಪದವಿನ ಬೆಜ್ಜಂಗಳ ನಿವಾಸಿ ದಿವಂಗತ ಎಂ. ಪಿ. ಅಬ್ದುಲ್ಲರವರ ಪುತ್ರ ಲುಕ್ಮಾನುಲ್ ಹಕೀಮ್ ಇವರ ವಿವಾಹ ಸಮಾರಂಭದಲ್ಲಿ ರಾಜ್ಯಪಾಲರು ಭಾಗವಹಿಸಿದ್ದು ವಿಶೇಷ ಗಮನ ಸೆಳೆಯಿತು. ವರನ ಸಹೋದರ, ಉದ್ಯಮಿ ಶರೀಫ್ ಅಬ್ದುಲ್ಲಾ ಇವರು ರಾಜ್ಯಪಾಲ ಮೊಹಮ್ಮದ್ ಖಾನ್ ಅವರ ಆಪ್ತ ಗೆಳೆಯರಾದ ಹಿನ್ನೆಲೆಯಲ್ಲಿ ಈ ವಿವಾಹ ಸಮಾರಂಭದಲ್ಲಿ ರಾಜ್ಯಪಾಲರೇ ಖುದ್ದಾಗಿ ಭಾಗವಹಿಸಿಧ್ದು ವಿಶೇಷತೆಯಾಗಿತ್ತು.
ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹರ್ಷಾದ್ ವರ್ಕಾಡಿ ಮುಂತಾದವರು ರಾಜ್ಯಪಾಲರನ್ನು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು. ರಾಜ್ಯಪಾಲರು ಆಗಮಿಸುವ ಹಿನ್ನೆಲೆಯಲ್ಲಿ ಮೀಯಪದವು ಪರಿಸರ ಪರಿಸರದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶನಿವಾರ ಸಂಜೆ ಕಾಸರಗೋಡು ತಲುಪಿದ ರಾಜ್ಯಪಾಲರು ಭಾನುವಾರ ಅಪರಾಹ್ನ ವಿವಾಹಮನೆಗೆ ಆಗಮಿಸಿ ಒಂದು ತಾಸುಗಳ ಕಾಲ ಇಲ್ಲಿ ತಂಗಿ, ಭೋಜನದ ಬಳಿಕ ಹಿಂತಿರುಗಿದರು. ರಾಜ್ಯಪಾಲರಿಗೆ ಝಡ್ ಪ್ಲಸ್ ಭಧ್ರತೆ ಒದಗಿಸಲಾಗಿತ್ತು.