ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನ ಎರಡೂ ಸದನಗಳಲ್ಲಿ ಇಂದು ಗುರುವಾರ ತಮಿಳು ನಾಡಿನ ನೀಲಗಿರಿ ಜಿಲ್ಲೆಯ ಕೂನೂರು ಬಳಿ ನಿನ್ನೆ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದ ಬಗ್ಗೆ ಮಾಹಿತಿ ನೀಡಲಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ರಾಜ್ಯಸಭೆಯಲ್ಲಿ ಮತ್ತು ಮಧ್ಯಾಹ್ನ 12.15ಕ್ಕೆ ಲೋಕಸಭೆಯಲ್ಲಿ ರಕ್ಷಣಾ ಸಚಿವರು ಅಧಿಕೃತ ಹೇಳಿಕೆ ನೀಡಲಿದ್ದಾರೆ.
ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಸೇರಿದಂತೆ 13 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ವಾಯುಪಡೆಯ ಮಿ-17ವಿ5 ಸೇನಾ ಹೆಲಿಕಾಪ್ಟರ್ ತಮಿಳು ನಾಡಿನ ಕೂನೂರು ಬಳಿ ಭೀಕರ ದುರಂತಕ್ಕೀಡಾಗಿತ್ತು.
ಜನರಲ್ ಬಿಪಿನ್ ರಾವತ್ ಅವರು ಭಾರತೀಯ ರಕ್ಷಣಾ ಪಡೆ(CDS)ಯ ಮುಖ್ಯಸ್ಥರಾಗಿ ಡಿಸೆಂಬರ್ 31, 2019ರಲ್ಲಿ ನೇಮಕಗೊಂಡಿದ್ದರು. ಅದಕ್ಕೂ ಮೊದಲು ಭಾರತೀಯ ಸೇನೆಯ ಮುಖ್ಯಸ್ಥರಾಗಿ ಜನವರಿ 2017ರಿಂದ ಡಿಸೆಂಬರ್ 2019ರವರೆಗೆ ಸೇವೆ ಸಲ್ಲಿಸಿದ್ದರು. ಜನರಲ್ ರಾವತ್ ಭಾರತೀಯ ಸೇನೆಯ ಸೇವೆಗೆ ಸೇರ್ಪಡೆಯಾಗಿದ್ದು 1978ರ ಡಿಸೆಂಬರ್ ನಲ್ಲಿ.
ಪ್ರತಿದಾಳಿ ಯುದ್ಧಗಳಲ್ಲಿ ಭಾಗಿಯಾದ ಅನುಭವ ಹೊಂದಿರುವ ಜನರಲ್ ರಾವತ್, ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಅತ್ಯಂತ ಕಷ್ಟಕರ ಭೂಪ್ರದೇಶಗಳಲ್ಲಿ ಮತ್ತು ಸನ್ನಿವೇಶಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬ್ಲ್ಯಾಕ್ ಬಾಕ್ಸ್ ಪತ್ತೆ: ತಮಿಳು ನಾಡಿನ ಕೂನೂರು ಬಳಿ ಸಂಭವಿಸಿದ ಮಿಲಿಟರಿ ಹೆಲಿಕಾಪ್ಟರ್ ದುರಂತದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದ್ದು ಇದರಿಂದ ದುರಂತಕ್ಕೆ ನಿಖರ ಕಾರಣ ದೊರಕಲಿದೆ. ವಾಯುಪಡೆ ಸಿಬ್ಬಂದಿ ಹುಡುಕಾಡಿದಾಗ ಇಂದು ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ.
ವೆಲ್ಲಿಂಗ್ಟನ್ ಆಸ್ಪತ್ರೆಯಿಂದ ಮೃತದೇಹಗಳ ರವಾನೆ: ಇನ್ನೊಂದೆಡೆ 13 ಮಂದಿಯ ಮೃತದೇಹಗಳು ಇರುವ ವೆಲ್ಲಿಂಗ್ಟನ್ ನ ಸೇನಾಸ್ಪತ್ರೆಯಿಂದ ರವಾನೆ ಮಾಡಲಾಗುತ್ತಿದೆ. ತ್ರಿವರ್ಣ ಧ್ವಜದಿಂದ ಮುಚ್ಚಿರುವ ಪೆಟ್ಟಿಗೆಯಲ್ಲಿ ಪಾರ್ಥಿವ ಶರೀರಗಳನ್ನು ಇಟ್ಟು ಮೆರವಣಿಗೆ ಮೂಲಕ ಸಾಗಿಸಲಾಗುತ್ತಿದೆ.