ಕೊಚ್ಚಿ: ಮಲಯಾಳಂ ಚಿತ್ರರಂಗದ ಹಿರಿಯ ನಿರ್ದೇಶಕ ಕೆ ಎಸ್ ಸೇತುಮಾಧವನ್ ಶುಕ್ರವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಕೊಡಂಬಾಕಂ ಡೈರೆಕ್ಟರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ನಿಧನ ಹೊಂದಿದ್ದಾರೆ. ಸೇತುಮಾಧವನ್ ಅವರು 10 ರಾಷ್ಟ್ರ ಪ್ರಶಸ್ತಿಗಳು ಮತ್ತು 8 ರಾಜ್ಯ ಪ್ರಶಸ್ತಿಗಳನ್ನು ಗಳಿಸಿದ್ದು, 2009ರಲ್ಲಿ ಜೆ ಸಿ ಡೇನಿಯಲ್ ಪ್ರಶಸ್ತಿ ಪಡೆದಿದ್ದರು.
ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಸುಬ್ರಹ್ಮಣ್ಯಂ ಮತ್ತು ಲಕ್ಷ್ಮಿ ದಂಪತಿಗೆ 1931ರಲ್ಲಿ ಜನಿಸಿದ ಸೇತುಮಾಧವನ್ ಪಾಲಕ್ಕಾಡ್‌ನ ಸರ್ಕಾರಿ ವಿಕ್ಟೋರಿಯಾ ಕಾಲೇಜಿನಲ್ಲಿ ಜೀವಶಾಸ್ತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಿದರು. ಅವರ ಮೊದಲ ಮಲಯಾಳಂ ಚಿತ್ರ ಜ್ಞಾನ ಸುಂದರಿ, ಇದು ಬರಹಗಾರ ಮುತ್ತತು ವರ್ಕಿ ಅವರ ಸಣ್ಣ ಕಥೆಯನ್ನು ಆಧರಿಸಿದೆ. ಅವರು 64 ಚಲನಚಿತ್ರಗಳನ್ನು ನಿರ್ದೇಶಿಸಿದ್ದರು. ಪ್ರಮುಖ ಸಾಹಿತ್ಯ ಕೃತಿಗಳನ್ನು ಆಧರಿಸಿ ಹೆಚ್ಚಿನ ಚಲನಚಿತ್ರಗಳನ್ನು ಇವರು ನಿರ್ದೇಶಿಸಿದ್ದರು ಎಂಬುದು ಇಲ್ಲಿ ಗಮನಾರ್ಹ ಸಂಗತಿ.
ಪಿ ಕೇಶವದೇವ್ ಅವರ ಕಾದಂಬರಿಯಾಧಾರಿತ ಓಡೈಲ್ ನಿನ್ನು, ದಹಂ, ಸ್ಥಾನಾರ್ಥಿ ಸಾರಮ್ಮ, ಕೂಟ್ಟುಕುಡುಂಬಂ ವಜ್ವೆ ಮಾಯಂ, ಆರ ನಾಜಿಕ ನೇರಂ, ಅನುಭವಂಗಳ್ ಪಳಿಚಕಲ್, ಕರಕನಕದಲ್, ಅಚನುಂ ಬಪ್ಪಾಯುಂ, ಪುನರ್ಜನ್ಮಮ್, ಚಟ್ಟಕರಿ, ಒಪ್ಪೋಲ್, ಮರುಪಕ್ರಿ, ಒಪ್ಪೋಲ್ ಹಾಗೂ ಕನ್ನಡದ ಚಿತ್ರ ಮಾನಿನಿ ಸೇತುಮಾಧವನ್ ಅವರ ಪ್ರಮುಖ ಚಿತ್ರಗಳಾಗಿವೆ.
ನಿರ್ದೇಶಿಸಿದ್ದ ಚಲನಚಿತ್ರ ಅಚನುಮ್ ಬಪ್ಪಾಯುಮ್ 1973 ರಲ್ಲಿ ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರ ನರ್ಗೀಸ್ ದತ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಸೇತುಮಾಧವನ್ 1991ರಲ್ಲಿ ಮರುಪಕ್ಕಂ ಚಿತ್ರದ ಮೂಲಕ ತಮಿಳಿಗೆ ಮೊದಲ ಬಾರಿಗೆ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದರು. 1996ರಲ್ಲಿ ಅವರ ತೆಲುಗು ಚಿತ್ರ ಸ್ತ್ರೀ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದುಕೊಂಡಿತು.
1951 ರಲ್ಲಿ ನಿರ್ದೇಶಕ ಕೆ ರಾಮನಾಥನ್ ಅವರ ಸಹಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಸೇತುಮಾಧವನ್ 1961ರಲ್ಲಿ ವೀರವಿಜಯ ಚಿತ್ರದ ಮೂಲಕ ಸ್ವತಂತ್ರ ಚಲನಚಿತ್ರ ನಿರ್ಮಾಪಕರಾದರು. ನಟ ಕಮಲ್ ಹಾಸನ್ ಅವರನ್ನು ಮಲಯಾಳಂ ಚಿತ್ರರಂಗಕ್ಕೆ ಬಾಲ ಕಲಾವಿದರಾಗಿ ತಮ್ಮ ಕಣ್ಣುಮ್ ಕರಲುಮ್ ಚಿತ್ರದ ಮೂಲಕ 1962 ರಲ್ಲಿ ಪರಿಚಯಿಸಿದರು. ಈ ಚಿತ್ರದಲ್ಲಿ ನಟ ಸತ್ಯನ್ ಪುತ್ರ. ನಂತರ ಅವರು ತಮ್ಮ ಕನ್ಯಾಕುಮಾರಿ ಚಿತ್ರಕ್ಕಾಗಿ ಕಮಲ್ ಹಾಸನ್ ಅವರನ್ನು ಮಲಯಾಳಂ ಚಿತ್ರರಂಗದಲ್ಲಿ ನಾಯಕನಾಗಿ ಪರಿಚಯಿಸಿದರು, ಇದು ನಟ ಜಗತಿ ಶ್ರೀಕುಮಾರ್ ಅವರ ಚೊಚ್ಚಲ ಚಿತ್ರವೂ ಆಗಿತ್ತು. 1965 ರಲ್ಲಿ ನಟ ಸುರೇಶ್ ಗೋಪಿ ಸೇತುಮಾಧವನ್ ಅವರ ಓಡೈಲ್ ನಿನ್ನು ಚಿತ್ರದ ಮೂಲಕ ಬಾಲ ಕಲಾವಿದನಾಗಿ ಮಲಯಾಳಂ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಟ ಮಮ್ಮುಟ್ಟಿ ಅವರು 1971 ರಲ್ಲಿ ಸೇತುಮಾಧವನ್ ನಿರ್ದೇಶನದ ಅನುಭವಂಗಳ್ ಪಲಿಚಕಲ್ ಚಿತ್ರದಲ್ಲಿ ಕಿರಿಯ ಕಲಾವಿದನಾಗಿ ಪಾದಾರ್ಪಣೆ ಮಾಡಿದರು.
ಅವರು 6 ಭಾಷೆಗಳಲ್ಲಿ 64 ಸಿನಿಮಾಗಳನ್ನು ನಿರ್ದೇಶಿಸಿದ್ದರು. 1991ರಲ್ಲಿ ಬಿಡುಗಡೆಯಾದ ಬರಹಗಾರ ಎಂ ಟಿ ವಾಸುದೇವನ್ ನಾಯರ್ ಚಿತ್ರಕಥೆ ಬರೆದ ವೆನಾಲ್ ಕಿನಾವುಕಲ್ ಅವರು ನಿರ್ದೇಶಿಸಿದ ಕೊನೆಯ ಮಲಯಾಳಂ ಚಲನಚಿತ್ರವಾಗಿದೆ. ಅವರು ಪತ್ನಿ ಸಾಲಸಲಾ ಸೇತುಮಾಧವನ್, ಪುತ್ರರಾದ ಸೋನುಕುಮಾರ್, ಸಂತೋಷ್ ಮತ್ತು ಪುತ್ರಿ ಉಮಾ ಅವರನ್ನು ಅಗಲಿದ್ದಾರೆ. ಅವರ ಮಗ ಸಂತೋಷ್ ಸೇತುಮಾಧವನ್ 2012 ರಲ್ಲಿ ಖ್ಯಾತ ಚಿತ್ರ ಚಟ್ಟಕರಿಯನ್ನು ರೀಮೇಕ್ ಮಾಡಿದ್ದರು.