ನವದೆಹಲಿ : ದೂರಸಂಪರ್ಕ ಇಲಾಖೆಯು ಯುನಿಫೈಡ್ ಲೈಸನ್ಸ್ ಒಪ್ಪಂದಕ್ಕೆ ತಿದ್ದುಪಡಿ ತಂದಿದ್ದು ಈ ಮೂಲಕ ಎಲ್ಲಾ ಇಂಟರ್ನೆಟ್ ಮತ್ತು ಟೆಲಿಕಾಂ ಪೂರೈಕೆದಾರರಿಗೆ ಸೂಚನೆ ನೀಡಿ ಎಲ್ಲಾ ವಾಣಿಜ್ಯ ಮತ್ತು ಇತರ ಕರೆ ಮಾಹಿತಿ ವಿವರಗಳನ್ನು ಈಗಿನ ಒಂದು ವರ್ಷದ ಬದಲು ಕನಿಷ್ಠ ಎರಡು ವರ್ಷಗಳ ತನಕ ಇರಿಸಿಕೊಳ್ಳಬೇಕೆಂದು ಹೇಳಿದೆ.
ತನಿಖಾ ಏಜನ್ಸಿಗಳ ಮನವಿಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಇಲಾಖೆ ಹೇಳಿದೆ ಎಂದು indianexpress ವರದಿ ಮಾಡಿದೆ.
ಈ ಕುರಿತು ಡಿಸೆಂಬರ್ 21ರಂದು ಇಲಾಖೆ ಅಧಿಸೂಚನೆ ಹೊರಡಿಸಿದೆ.
ಈ ಆದೇಶದ ಪ್ರಕಾರ ಎಲ್ಲಾ ಕರೆ ಮಾಹಿತಿ ವಿವರ, ಎಕ್ಸ್ಚೇಂಜ್ ಡಿಟೇಲ್ ರೆಕಾರ್ಡ್ ಮತ್ತು ಐಪಿ ಡಿಟೇಲ್ ರೆಕಾರ್ಡ್ ಅನ್ನು ಎರಡು ವರ್ಷಗಳ ತನಕ ಅಥವಾ ಸರಕಾರ ಸೂಚಿಸಿದ ಅವಧಿ ತನಕ ಇರಿಸಿಕೊಳ್ಳಬೇಕಿದೆ. ಸಾಮಾನ್ಯ ಐಪಿ ವಿವರದ ದಾಖಲೆ ಹೊರತಾಗಿ ಇಂಟರ್ನೆಟ್ ಸೇವಾ ಪೂರೈಕೆದಾರರು ಇಂಟರ್ನೆಟ್ ಟೆಲಿಫೋನ್ ವಿವರಗಳನ್ನೂ ಇರಿಸಿಕೊಳ್ಳಬೇಕಿದೆ.
ಈ ಕುರಿತಂತೆ ಎಲ್ಲಾ ಸಂಬಂಧಿತ ಸೇವಾ ಪೂರೈಕೆದಾರರೊಂದಿಗೆ ಸಭೆ ನಡೆಸಿದ್ದು ಎಲ್ಲರೂ ಒಪ್ಪಿದ್ದಾರೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ದೇಶದ ವಿವಿಧ ಕಡೆಗಳ ಮೊಬೈಲ್ ಬಳಕೆದಾರರ ಕರೆ ವಿವರಗಳನ್ನು ಸರಕಾರ ಕೇಳುತ್ತಿದೆ ಎಂದು ಈ ವರ್ಷದ ಮಾರ್ಚ್ ತಿಂಗಳಲ್ಲಿ ಮಾಧ್ಯಮವೊಂದು ವರದಿ ಮಾಡಿತ್ತು. ಟೆಲಿಕಮ್ಯುನಿಕೇಶನ್ ನೆಟ್‌ವರ್ಕ್ ಸೇವೆಗಳ ಕುರಿತ ದೂರುಗಳ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿತ್ತು ಎಂದು ಸರಕಾರ ಆಗ ಹೇಳಿತ್ತಲ್ಲದೆ ಗೌಪ್ಯತೆಯ ಉಲ್ಲಂಘನೆಯಾಗಿಲ್ಲ ಹಾಗೂ ವೈಯಕ್ತಿಕ ಮಾಹಿತಿ ಸಂಗ್ರಹಿಸಲಾಗಿಲ್ಲ ಮತ್ತು ಯಾವುದೇ ಫೋನ್ ಸಂಖ್ಯೆ ಟ್ರ್ಯಾಕ್ ಮಾಡಿಲ್ಲ ಎಂದು ಸರಕಾರ ಆಗ ಸ್ಪಷ್ಟಪಡಿಸಿತ್ತು.