ಮಂಜೇಶ್ವರ: ಓಮೈಕ್ರಾಮ್ ಆತಂಕದ ಹಿನ್ನೆಲೆಯಲ್ಲಿ ಕೇರಳ ಕರ್ನಾಟಕ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಬಿಗು ತಪಾಸಣೆ ಮುಂದುವರಿದಿದೆ. ಮಂಗಳವಾರವೂ ಕೆಳಗಿನ ತಲಪಾಡಿಯಲ್ಲಿ ತಪಾಸಣೆ ನಡೆದಿದೆ. ಕಾಸರಗೋಡಿನಿಂದ ಮಂಗಳೂರು ಭಾಗಕ್ಕೆ ಸಾಗುವ ಎಲ್ಲಾ ವಾಹನಗಳನ್ನು ನಿಲ್ಲಿಸಿ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಪ್ರಮಾಣ ಪತ್ರ ಇದ್ದವರಿಗೆ ಮಾತ್ರ ಗಡಿ ದಾಟಲು ಅನುಮತಿ ನೀಡಲಾಗಿದೆ.
ಜೊತೆಗೆ ಪ್ರಮಾಣ ಪತ್ರ ಇರದವರಿಗೆ ಸ್ಥಳದಲ್ಲೇ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ನಡೆಸಿ ಮೊಬೈಲ್ ಲಭಿಸುವ ಸಂದೇಶವನ್ನು ತಪಾಸಣಾ ನಿರತ ಅಧಿಕಾರಿಗಳಿಗೆ ತೋರಿಸಿ ಸಂಚರಿಸಲು ಅನುಮತಿ ನೀಡಲಾಗಿತ್ತು. ಆದರೆ ಕಾಸರಗೋಡು-ಮಂಗಳೂರು ರಸ್ತೆಯಲ್ಲಿ ಸಾಗುವ ಬಸ್ ಗಳಲ್ಲಿ ಯಾವುದೇ ತಪಾಸಣೆ ಇಲ್ಲದೆ ಪ್ರಯಾಣಿಸಿರುವುದು ಕಂಡುಬಂದಿದೆ. ಬಸ್ ಪ್ರಯಾಣಿಕರು ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಪ್ರಮಾಣ ಪತ್ರ ಇಲ್ಲದೆ ಬಸ್ ಸಂಚಾರ, ಪ್ರಯಾಣಕ್ಕೆ ಅವಕಾಶ ನೀಡಬಾರದೆಂದು ಬಸ್ ನಿರ್ವಾಹಕರಿಗೆ ಈ ಹಿಂದೆಯೇ ಆದೇಶ ನೀಡಲಾಗಿತ್ತು. ಇಲಾಖೆ ಮತ್ತು ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಸಿಬ್ಬಂದಿಗಳು ಸೋಮವಾರದಿಂದಲೇ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಸಾರಡ್ಕ, ಪಂಜಿಕಲ್ಲು, ಸ್ವರ್ಗ, ಮುಳಿಗದ್ದೆ-ಮುಗುಳಿ, ಬೆರಿಪದವು ಮೊದಲಾದ ಅಂತರ್ ರಾಜ್ಯ ಗಡಿಗಳಲ್ಲಿ ತಪಾಸಣೆ ಆರಂಭಿಸಲಾಗಿದೆ.
ಕಾಸರಗೋಡು ಮಂಗಳೂರು ಸಂಚಾರ ಸುಗಮವಾಗಿ ಮುಂದುವರಿದಿದೆ. ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ವಿಭಾಗದ ಶೈಲಜ ಖಾರ್ವಿ ತಲಪಾಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.