ಬೀಜಿಂಗ್: ಚೀನಾದ ವುಹಾನ್ನಲ್ಲಿ ಎರಡು ವರ್ಷದ ಹಿಂದೆ ಆರಂಭವಾದ ಕರೊನಾ ಮಹಾಮಾರಿಯ ನಿಯಂತ್ರಣಕ್ಕೆ ಈಗ ಒಂದು ಪ್ರಾಂತ್ಯದಲ್ಲಿ ಮತ್ತೆ ಲಾಕ್ಡೌನ್ ಹೇರಲಾಗಿದ್ದು, ಇದು ಈವರೆಗಿನ ಅತಿ ದೊಡ್ಡ ಲಾಕ್ಡೌನ್ ಆಗಲಿದೆ.
ಪಶ್ಚಿಮದ ಕ್ಸಿಯಾನ್ ನಗರದಲ್ಲಿ ಕೋವಿಡ್ ಆಸ್ಪೋಟ ತಡೆಯಲು ಚೀನಾ ಗುರುವಾರ ಲಾಕ್ಡೌನ್ ವಿಧಿಸಿದೆ.
ಬೂಸ್ಟರ್ ಡೋಸ್ ಪರಿಣಾಮಕಾರಿ: ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಬಳಕೆಯಾಗುತ್ತಿರುವ ಆಕ್ಸ್ಫರ್ಡ್- ಅಸ್ಟ್ರಾಜೆನಿಕಾ ಲಸಿಕೆಯ ಬೂಸ್ಟರ್ ಡೋಸ್ ಒಮಿಕ್ರಾನ್ ರೂಪಾಂತರಿ ವಿರುದ್ಧ ಪರಿಣಾಮಕಾರಿಯಾಗಲಿದೆ ಎಂದು ಆಸ್ಟ್ರಾಜೆನಿಕಾ ಔಷಧ ಕಂಪನಿ ಗುರುವಾರ ಹೇಳಿದೆ. ಮೂರು ಡೋಸ್ ಲಸಿಕೆಯ ಲ್ಯಾಬ್ ಪ್ರಯೋಗದಿಂದ ಈ ಫಲಿತಾಂಶ ಹೊರಹೊಮ್ಮಿದೆ. ಡೆಲ್ಟಾ ಪ್ರಭೇದದ ವಿರುದ್ಧವೂ ಕೋವಿಶೀಲ್ಡ್ ಬೂಸ್ಟರ್ ಡೋಸ್ ಹೆಚ್ಚಿನ ರಕ್ಷಣೆ ಒದಗಿಸುತ್ತದೆ. ಕೋವಿಡ್ ಸೋಂಕಿತರಾಗಿ ನೈಸರ್ಗಿಕವಾಗಿ ಗುಣಮುಖ ಹೊಂದಿದವರಲ್ಲಿ ಇರುವ ಪ್ರತಿಕಾಯಕ್ಕಿಂತ ಕೋವಿಶೀಲ್ಡ್ ಮೂರನೇ ಡೋಸ್ ಪಡೆದವರಲ್ಲಿ ಹೆಚ್ಚಿರುತ್ತದೆ.
ಫೈಜರ್ ಹಾಗೂ ಮರ್ಕ್ ಕಂಪನಿ ಪ್ರತ್ಯೇಕವಾಗಿ ಅಭಿವೃದ್ಧಿಪಡಿಸಿರುವ ಕರೊನಾ ಮಾತ್ರೆಗಳ ತುರ್ತು ಬಳಕೆಗೆ ಅಮೆರಿಕ ಅನುಮೋದನೆ ನೀಡಿದ್ದು ಅದರ ಜೆನರಿಕ್ ಆವೃತ್ತಿಯನ್ನು ತಯಾರಿಸಲು ಭಾರತದ ಅನೇಕ ಕಂಪನಿಗಳು ಯೋಜಿಸುತ್ತಿವೆ. ಹೆಚ್ಚು ಅಪಾಯವಿರುವ ವಯಸ್ಕರಲ್ಲಿ ಮತ್ತು 12 ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳ ಚಿಕಿತ್ಸೆಗೆ ಪ್ಯಾಕ್ಸ್ಲೋವಿಡ್ ಬಳಸಲು ಅಮೆರಿಕದ ಆಹಾರ ಮತ್ತು ಔಷಧ ಸಂಸ್ಥೆ ಬುಧವಾರ ಅನುಮತಿ ನೀಡಿತ್ತು. ಕಡಿಮೆ ಡೋಸ್ನ ಎಚ್ಐವಿ ಔಷಧ ರಿಟೊನಾವಿರ್ ಜೊತೆಯಲ್ಲಿ ನೀಡಲಾಗುವ ಪ್ಯಾಕ್ಲೋವಿಡ್ ಒಂದು ಆಂಟಿ ವೈರಲ್ ಮದ್ದಾಗಿದೆ.
ಒಮಿಕ್ರಾನ್ ಬಳಿಕ 'ಡೆಲ್ಮಿಕ್ರಾನ್'!: ಕರೊನಾ ವೈರಸ್ನ ಹೊಸ ಪ್ರಭೇದ ಒಮಿಕ್ರಾನ್ನ ಗುಣಲಕ್ಷಣಗಳನ್ನು ಅರಿಯಲು ವಿಜ್ಞಾನಿಗಳು ಇನ್ನೂ ಪ್ರಯತ್ನಿಸುತ್ತಿರುವಾಗಲೇ ಕೋವಿಡ್ನ ಇನ್ನೊಂದು ರೂಪಾಂತರಿ ಪತ್ತೆ ಯಾಗಿದೆ. ಡೆಲ್ಮಿಕ್ರಾನ್ ಎಂಬ ಹೆಸರಿನ ಈ ತಳಿ ಅಮೆರಿಕ ಮತ್ತು ಯುರೋಪ್ನಲ್ಲಿ ಹಾಲಿ ಕರೊನಾ ಸ್ಪೋಟಕ್ಕೆ ಕಾರಣ ಎಂದು ಹೇಳಲಾಗಿದೆ. ಡೆಲ್ಮಿಕ್ರಾನ್ ರೂಪಾಂ ತರಿಯು ಡೆಲ್ಟಾ ಮತ್ತು ಒಮಿಕ್ರಾನ್ಗಳ ಸಂಯೋಜನೆ ಯಾಗಿದ್ದು ಅವೆರಡಕ್ಕಿಂತ ಹೆಚ್ಚು ವೇಗ ವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಡೆಲ್ಮಿಕ್ರಾನ್ ತಳಿಯು ಡೆಲ್ಟಾ ಮತ್ತು ಒಮಿಕ್ರಾನ್ ಅವಳಿ ಸ್ಪೈಕ್ಗಳಾಗಿದ್ದು ಯುರೋಪ್ ಮತ್ತು ಅಮೆರಿಕದಲ್ಲಿ ಪ್ರಕರಣಗಳ ಮಿನಿ ಸುನಾಮಿಗೆ ಕಾರಣವಾಗಿದೆ ಎಂದು ಮಹಾರಾಷ್ಟ್ರದ ಕೋವಿಡ್-19 ಕಾರ್ಯ ಪಡೆಯ ಸದಸ್ಯ ಶಶಾಂಕ್ ಜೋಷಿ ಹೇಳಿದ್ದಾರೆ.
ಬ್ರಿಟನ್ ಆತಂಕ: ಪ್ರತಿದಿನ ಒಂದು ಲಕ್ಷಕ್ಕೂ ಅಧಿಕ ಕರೊನಾ ಕೇಸ್ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಬ್ರಿಟನ್ ಗಂಭೀರ ಸ್ಥಿತಿ ಎದುರಿಸುತ್ತಿದೆ. ಕರೊನಾ ಆರಂಭವಾದ ಬಳಿಕ ಇದು ಅತ್ಯಧಿಕ ದೈನಿಕ ಪ್ರಕರಣವಾಗಿದೆ. ಕಳೆದ ಒಂದು ವಾರದಲ್ಲಿ 6.5 ಲಕ್ಷ ಹೊಸ ಕರೊನಾ ಕೇಸ್ಗಳು ಪತ್ತೆಯಾಗಿವೆ. ಪ್ರತಿದಿನ ಸರಾಸರಿ 140 ಜನರು ಕರೊನಾದಿಂದ ಮೃತರಾಗುತ್ತಿದ್ದಾರೆ.
ಲಸಿಕೆ ಖರೀದಿಗೆ 19,675 ರೂ. ಕೋಟಿ ವೆಚ್ಚ: ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ವಿತರಿಸಲು ಕೋವಿಡ್ ವ್ಯಾಕ್ಸಿನ್ ಖರೀದಿಗೆ ಕೇಂದ್ರ ಸರ್ಕಾರ ಡಿಸೆಂಬರ್ 20ರ ವರೆಗೆ 19,675 ಕೋಟಿ ರೂಪಾಯಿ ವೆಚ್ಚ ಮಾಡಿದೆ. ಲಸಿಕೆಗಾಗಿ 2021-22ನೇ ಸಾಲಿನ ಬಜೆಟ್ನಲ್ಲಿ ಸರ್ಕಾರ 35,000 ಕೋಟಿ ರೂಪಾಯಿ ನಿಗದಿಪಡಿಸಿತ್ತು ಎಂದು ಆರ್ಟಿಐ ಅರ್ಜಿದಾರ ಅಮಿತ್ ಗುಪ್ತಾಗೆ ಸರ್ಕಾರ ವಿವರಿಸಿದೆ.
ಶೇಕಡ 60 ಅರ್ಹರಿಗೆ ಪೂರ್ಣ ಲಸಿಕೆ: ಭಾರತದ ಎಲ್ಲ ಅರ್ಹ ವಯಸ್ಕರಲ್ಲಿ ಶೇಕಡ 60 ಮಂದಿಗೆ ಎರಡೂ ಡೋಸ್ ಕರೊನಾ ತಡೆ ಲಸಿಕೆ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಒಟ್ಟು 139,69,79,774 ಡೋಸ್ ವ್ಯಾಕ್ಸಿನ್ ನೀಡಲಾಗಿದೆ ಎಂದು ಸಚಿವಾಲಯದ ಟ್ವಿಟರ್ ಖಾತೆ ವಿವರಿಸಿದೆ.
ಪ್ರಧಾನಿ ಮೋದಿ ಪರಿಶೀಲನೆ ಸಭೆ: ದೇಶದಲ್ಲಿ ಹೆಚ್ಚುತ್ತಿರುವ ಕರೊನಾ ವೈರಸ್ನ ಒಮಿಕ್ರಾನ್ ಪ್ರಭೇದದಿಂದ ಉಂಟಾಗಿರುವ ಆತಂಕಕಾರಿ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಹೊಸ ತಳಿಯ ಸೋಂಕು ಹೆಚ್ಚಾಗದಂತೆ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಮೋದಿ ಸಭೆಯಲ್ಲಿ ನಿರ್ದೇಶನ ನೀಡಿದರು ಎಂದು ತಿಳಿದು ಬಂದಿದೆ. ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು ದೇಶದಲ್ಲಿ ಹೊಸ ತಳಿಯ ಕೇಸ್ ಸಂಖ್ಯೆ 300ನ್ನು ದಾಟಿದೆ. ದೆಹಲಿ ಮತ್ತು ಮಹಾರಾಷ್ಟ್ರ ಅಲ್ಲದೆ ತೆಲಂಗಾಣ, ಕರ್ನಾಟಕ, ರಾಜಸ್ಥಾನ, ಕೇರಳ, ಗುಜರಾತ್, ಜಮ್ಮು-ಕಾಶ್ಮೀರ, ಒಡಿಶಾ, ಉತ್ತರ ಪ್ರದೇಶ, ಆಂಧ್ರ ಪ್ರದೇಶ, ಚಂಡೀಗಢ, ಲಡಾಖ್ ಕೂಡ ಒಮಿಕ್ರಾನ್ ಸೋಂಕಿತರು ಕಂಡು ಬಂದಿದ್ದಾರೆ.