ಕಾಸರಗೋಡು: ಮನುಕುಲದ ರಕ್ಷಣೆಗಾಗಿ ಭೂಲೋಕದಲ್ಲಿ ಜನಿಸಿದ ಯೇಸುಕ್ರಿಸ್ತರ ಜನ್ಮದಿನ ಕ್ರಿಸ್‍ಮಸ್ ಹಬ್ಬವನ್ನು ಜಿಲ್ಲೆಯಲ್ಲಿ ಆಚರಿಸಲಾಯಿತು. ಕ್ರೈಸ್ತರ ಮನೆ, ಇಗರ್ಜಿ, ವ್ಯಾಪಾರಿ ಸಂಸ್ಥೆಗಳ ಸಹಿತ ವಿವಿಧೆಡೆ ಕ್ರಿಸ್ಮಸ್ ಆಚರಿಸಲಾಯಿತು.
ಇಗರ್ಜಿಗಳಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನೂರಾರುಮಂದಿ ಕ್ರೈಸ್ತ ಬಾಂಧವರು ಪಾಲ್ಗೊಂಡರು. ಇಗರ್ಜಿ, ಮನೆ, ಅಂಗಡಿಗಳನ್ನು ವರ್ಣರಂಜಿತ ದೀಪಗಳಿಂದ ಅಲಂಕಾರಗೊಳಿಸಲಾಗಿತ್ತು. ಬೇಳ ಶೋಕಮಾತಾ ಇಗರ್ಜಿ, ಪೆರ್ಮುದೆ ಸೈಂಟ್ ಲಾರೆನ್ಸ್ ಇಗರ್ಜಿ, ಕುಂಬಳೆ ಸಂತ ಮೋನಿಕಾ ಇಗರ್ಜಿ, ಕಯ್ಯಾರು ಇಗರ್ಜಿ, ಉಕ್ಕಿನಡ್ಕ ಯೇಸುವಿನ ಪವಿತ್ರ ಹೃದಯ ದೇವಾಲಯ, ವರ್ಕಾಡಿ, ಮಂಜೇಶ್ವರ ಸಹಿತ ವಿವಿಧ ಇಗರ್ಜಿಗಳಲ್ಲಿ ವಿಶೇಷ ಪ್ರಾರ್ಥನೆ, ದಿವ್ಯ ಬಲಿಪೂಜೆ ನಡೆಯಿತು. ಕ್ರಿಸ್ಮಸ್ ಅಂಗವಾಗಿ ಕ್ಯಾರಲ್ಸ್ ಗಾಯನ ನಡೆಯಿತು. ಯುವಸಂಘಟನೆಗಳ ವತಿಯಿಂದ ಸಾಂತಾಕ್ಲಾಸ್ ವೇಷಧಾರಿಯನ್ನಳಗೊಂಡ ಕ್ರಿಸ್ಮಸ್ ಸಂದೇಶ ಯಾತ್ರೆ ಕಾಸರಗೋಡು ನಗರದಲ್ಲಿ ನಡೆಯಿತು. ನಾನಾ ಕಡೆ ಗೋದಲಿಗಳನ್ನು ನಿರ್ಮಿಸಿ ಬಾಲಯೇಸುವಿನ ಮೂರ್ತಿಯನ್ನಿರಿಸಿ ಸ್ತುತಿಸಲಾಯಿತು.
ಪೆರ್ಮುದೆಯಲ್ಲಿ ಕ್ರಿಸ್ಮಸ್ ಆಚರಣೆ
ಕುಂಬಳೆ: ಪೆರ್ಮುದೆ ಲಾರೆನ್ಸ್ ನಗರದ ಸೈಂಟ್ ಲಾರೆನ್ಸ್ ದಿ ಮಾರ್ಟಿರ್ ಇಗರ್ಜಿಯಲ್ಲಿ ವಿವಿಧ ಧಾರ್ಮಿಕ-ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಕ್ರಿಸ್ಮಸ್ ಹಬ್ಬ ಆಚರಿಸಲಾಯಿತು. ಕ್ರಿಸ್ಮಸ್ ಕ್ಯಾರೊಲ್ಸ್ ಗಾಯನ, ಸಂಭ್ರಮದ ದಿವ್ಯಬಲಿಪೂಜೆ ನಡೆಯಿತು. ಧರ್ಮಗುರು ಫಾ. ಮೆಲ್ವಿನ್ ಫೆರ್ನಾಂಡಿಸ್ ನೇತೃತ್ವ ನೀಡಿದರು.
ದಿವ್ಯಬಲಿಪೂಜೆ ಬಳಿಕ ಭಾರತೀಯ ಕೆಥೋಲಿಕ ಯುವಸಂಚಲನ ಪೆರ್ಮುದೆ ಘಟಕದ ಆಶ್ರಯದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕ್ರಿಸ್ಮಸ್ ಶುಭಾಶಯ ಗೀತೆಯೊಂದಿಗೆ ಸಾಂತಾಕ್ಲಾಸ್ ವೇದಿಕೆಗೆ ಆಗಮಿಸಿದರು.
ಸಭಾ ಕಾರ್ಯಕ್ರಮದಲ್ಲಿ ಧರ್ಮಗುರು ಪಾ. ಮೆಲ್ವಿನ್ ಫೆರ್ನಾಂಡಿಸ್ ಕ್ರಿಸ್ಮಸ್ ಸಂದೇಶ ನೀಡಿ ಮಾತನಾಡಿ, ಜಗತ್ತಿನಲ್ಲಿ ಶಾಂತಿ-ಸಮಾಧಾನ ನೆಲೆಯೂರಬೇಕು. ಎಲ್ಲರೂ ಪರಸ್ಪರ ಕ್ಷಮಿಸಿ ಸಾಮರಸ್ಯದಿಂದ ಬಾಳಬೇಕು ಎಂದು ಯೇಸು ಆಶಿಸಿದರು. ಅವರ ಉದ್ದೇಶ ಈಡೇರಬೇಕಾದರೆ ನಾವು ಅವರ ಪಥದಲ್ಲಿ ಸಂಚರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ದಿನದಂದು ಜನ್ಮದಿನ ಆಚರಿಸುವವರಿಗೆ ಕೇಕ್ ತುಂಡರಿಸಿ ಶುಭಾಶಯ ಕೋರಲಾಯಿತು. ಪಾಲನಾ ಸಮಿತಿ ಉಪಾಧ್ಯಕ್ಷ ಸಿಪ್ರಿಯನ್ ಡಿಸೋಜ, ಕಾರ್ಯದರ್ಶಿ ಜೋನ್ ಡಿಸೋಜ ಓಡಂಗಲ್ಲು, ಐಸಿವೈಎಂ ಪೆರ್ಮುದೆ ಘಟಕ ಅಧ್ಯಕ್ಷ ಪ್ರಶಾಂತ್ ಡಿಸೋಜ ಕಾನಡ್ಕ ಉಪಸ್ಥಿತರಿದ್ದರು. ಐಸಿಅವೈಎಂ ಪೆರ್ಮುದೆ ಘಟಕ ಸದಸ್ಯ ಅನಿಶ್ ಕ್ರಾಸ್ತ ಪೆರಿಯಡ್ಕ ಸ್ವಾಗತಿಸಿದರು. ಲವೀನ ಪ್ರೀತಿ ಕ್ರಾಸ್ತ, ರಶ್ಮಿತಾ ಡಿಸೋಜ, ಜ್ಯೋತಿ ವಿನಿತ ಕಾರ್ಯಕ್ರಮ ನಿರೂಪಿಸಿದರು.
ಇಗರ್ಜಿ ಪರಿಸರದ ಮಕ್ಕಳು, ಹಿರಿಯರಿಂದ ನೃತ್ಯ, ಗಾಯನ ಮೊದಲಾದ ಮನೋರಂಜನಾ ಕಾರ್ಯಕ್ರಮಗಳು ನಡೆದವು.