ಸಾತ್ನಾ: ಆನ್ ಲೈನ್ ತರಗತಿಯಲ್ಲಿದ್ದಾಗ ಮೊಬೈಲ್ ಫೋನ್ ಸ್ಫೋಟಗೊಂಡು 15 ವರ್ಷದ ಬಾಲಕನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಸಾತ್ನಾ ಜಿಲ್ಲಾ ಕೇಂದ್ರದಿಂದ 35 ಕಿಲೋ ಮೀಟರ್ ದೂರದಲ್ಲಿರುವ ಚಂದ್ ಕುಯಿಯಾ ಹಳ್ಳಿಯಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿರುವುದಾಗಿ ಅವರು ಹೇಳಿದ್ದಾರೆ.
8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ರಾಮ್ ಪ್ರಕಾಶ್ ಬದೌರಿಯಾ, ಆನ್ ಲೈನ್ ತರಗತಿಯಲ್ಲಿದ್ದಾಗ ಇದ್ದಕ್ಕಿದ್ದಂತೆ ಮೊಬೈಲ್ ಫೋನ್ ಸ್ಫೋಟಗೊಂಡಿದೆ. ಇದರಿಂದ ಆತ ಹಲ್ಲಿನ ದವಡೆ ಗಾಯದ ಸಮಸ್ಯೆಯಿಂದ ನರಳುತ್ತಿರುವುದಾಗಿ ನಾಗೋದ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಆರ್.ಪಿ. ಮಿಶ್ರಾ ಫೋನ್ ಮೂಲಕ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಬಾಲಕನ ಪೋಷಕರು ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಿದ್ದಾಗ ಆತ ಮನೆಯಲ್ಲಿ ಒಬ್ಬನೇ ಇದ್ದಾಗ ಈ ಘಟನೆ ಸಂಭವಿಸಿದೆ. ಸ್ಫೋಟದ ಶಬ್ದ ಕೇಳಿ ನೆರೆಹೊರೆಯವರು ಬಂದು ನೋಡಿದಾಗ ಮೊಬೈಲ್ ಸ್ಫೋಟಗೊಂಡಿರುವುದು ಕಂಡುಬಂದಿದೆ. ನಂತರ ಗಾಯಾಳು ಬಾಲಕನಿಗೆ ಜಬಲ್ ಪುರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಸಾತ್ನಾದ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.